ಬೆಂಗಳೂರು: ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡು ಹಲವು ಬಾರಿ ಪೊಲೀಸರಿಂದ ಬಂಧಿತನಾಗಿ ಜೈಲಿಗೆ ಹೋಗಿ ಬಂದರೂ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಕುಖ್ಯಾತ ಮನೆಗಳ್ಳನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ್ ಅಲಿಯಾಸ್ ಅಪ್ಪು (42) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 300 ಗ್ರಾಂಗಿಂತಲೂ ಹೆಚ್ಚಿನ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಡಿ. 3ರಂದು ಎಂಇಎಸ್ ರಸ್ತೆ ಜ್ಯೂವೆಲ್ಲರಿ ಶಾಪ್ ಬಳಿ ಶ್ರೀನಿವಾಸ್ ಅನುಮಾನಾಸ್ಪಾದವಾಗಿ ಓಡಾಡುತ್ತಿದ್ದ. ಈತನನ್ನು ಕಂಡು ಗಸ್ತಿನಲ್ಲಿದ್ದ ಪೊಲೀಸರು ಪ್ರಶ್ನಿಸಿದ್ದಾರೆ. ಸಮಂಜಸ ಉತ್ತರ ನೀಡದ ಕಾರಣ ವಶಕ್ಕೆ ಪಡೆದು ಶೋಧ ನಡೆಸಿದಾಗ ಜೇಬಿನಲ್ಲಿ ಚಿನ್ನದ ಸರ ಪತ್ತೆಯಾಗಿದೆ. ಈ ಬಗ್ಗೆ ವಿಚಾರಿಸಿದಾಗ ಒಂದೂವರೆ ತಿಂಗಳ ಹಿಂದೆ ಮಹಾಲಕ್ಷ್ಮೀ ಲೇಔಟ್ ಮನೆಯೊಂದರಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಈ ಸಂಬಂಧ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 30ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಗಲಿನಲ್ಲಿ ಮನೆ ಗುರುತಿಸಿಕೊಂಡು ರಾತ್ರಿ ಕಳ್ಳತನ ಮಾಡುತ್ತಿದ್ದ. ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿದ್ದ ಶ್ರೀನಿವಾಸ್, ಹಗಲಿನಲ್ಲಿ ನಗರದ ಹಲವೆಡೆ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬಂದು ಬೀಗ ಒಡೆದು ಕಳ್ಳತನ ಮಾಡುತ್ತಿದ್ದ. ಪೊಲೀಸರಿಗೆ ಅನುಮಾನ ಬಾರದಿರಲು ಒಬ್ಬನೇ ಕಳ್ಳತನ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಗಿರವಿ ಅಂಗಡಿಗಳಲ್ಲಿ ಅಡವಿಟ್ಟು ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ.
ಬಂದ ಹಣವನ್ನು ಗಾಂಜಾ ಸೇವನೆ ಸೇರಿದಂತೆ ದುಶ್ಚಟಗಳಿಗೆ ಬಳಸಿಕೊಳ್ಳುತ್ತಿದ್ದ. ಅವಿವಾಹಿತನಾಗಿರುವ ಶ್ರೀನಿವಾಸ್, 13 ವರ್ಷ ಇದ್ದಾಗಲೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಈ ಹಿಂದೆ ಸಿಸಿಬಿ ಪೊಲೀಸರು ಸೇರಿದಂತೆ ವಿವಿಧ ಠಾಣೆಗಳ ಪೊಲೀಸರು ಈತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಅಲ್ಲದೆ ಅಪರಾಧ ಪ್ರಕರಣವೊಂದರಲ್ಲಿ ಮೂರು ವರ್ಷಗಳ ಸಜೆಯಾಗಿತ್ತು. ಐದು ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ ಈತ ದುಶ್ಚಟಗಳನ್ನು ತೀರಿಸಿಕೊಳ್ಳಲು ಕಳ್ಳತನದ ಹಾದಿ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.