ಬೆಂಗಳೂರು: ಸೋಂಕು ಹೆಚ್ಚಿರುವ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಜೊತೆ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಳ್ಳಿಗಳಲ್ಲಿ ಸೋಂಕು ತಡೆಗೆ ಕಂಟೇನ್ಮೆಂಟ್ ಝೋನ್ ಮಾಡಲು ಸೂಚಿಸಿರುವುದಾಗಿ ಅವರು ಹೇಳಿದರು.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಕೊರೊನಾ ಸೋಂಕು ಪ್ರಕರಣಗಳು ಕಂಡು ಬಂದಿದೆಯೋ, ಅಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಮಾಡಲು ಸೂಚನೆ ಕೊಡಲಾಗಿದೆ. ಅದರ, ಜವಾಬ್ದಾರಿ ಅಲ್ಲಿನ ಪಿಡಿಒ, ಆರೋಗ್ಯ ಅಧಿಕಾರಿಗಳು, ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ವಹಿಸಲಾಗಿದೆ. ಅಂತಹ ಪ್ರದೇಶದ ಜನರಿಗೆ ಉಚಿತವಾಗಿ ಔಷಧಿ ಮತ್ತು ಪಡಿತರ ವಿತರಣೆಗೂ ಸೂಚನೆ ನೀಡಲಾಗಿದೆ. ಕಂಟೈನ್ಮೆಂಟ್ ಝೋನ್ಗಳಲ್ಲಿ ನಿಗಾ ಇರಿಸಲು ಗ್ರಾಮ ಮಟ್ಟದಲ್ಲೇ ಸಮಿತಿ ರಚಿಸಲಾಗುತ್ತದೆ. ಕಂಟೇನ್ಮೆಂಟ್ ಝೋನ್ ಮಾಡದೆ ಕೊರೊನಾ ಹರಡುವಿಕೆ ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿದ್ದು, ಪ್ರಾಥಮಿಕ ಸಂಪರ್ಕಿತರಿಗೆ ವಿಟಮಿನ್, ಜಿಂಕ್ ಮಾತ್ರೆಗಳನ್ನು ಕೊಡಲು ಸೂಚನೆ ನೀಡಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಕೊರೊನಾ ಹರಡುವಿಕೆಯ ಸುಧಾರಣೆ ಆರಂಭಿಸಿದ್ದೇವೆ. ವೈದ್ಯರಿಗೂ ಕೂಡ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಲಾಕ್ಡೌನ್ 3.O: ಸಂಜೆ ಸಿಎಂ ನೇತೃತ್ವದಲ್ಲಿ ಸಚಿವರು, ಅಧಿಕಾರಿಗಳ ಮಹತ್ವದ ಸಭೆ
ನಾಳೆ ಮುಖ್ಯಮಂತ್ರಿಗಳು ಹೆಚ್ಚು ಸೋಂಕು ಇರುವ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಗ್ರಾಮೀಣ ಪ್ರದೇಶದ ಕಡೆ ಸರ್ಕಾರ ಗಮನ ಹರಿಸಿದೆ. ಹಾಗಾಗಿ, ಜಿಲ್ಲಾ ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದೇವೆ. ಲಾಕ್ ಡೌನ್ ನಿರ್ಧಾರವನ್ನು ಕೂಡ ಅವರಿಗೆ ಬಿಟ್ಟಿದ್ದೇವೆ ಎಂದು ತಿಳಿಸಿದರು.
ನಿನ್ನೆ ಬ್ಲ್ಯಾಕ್ ಫಂಗಸ್ ಬಗ್ಗೆ ಚರ್ಚೆಯಾಗಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬೇಕಾದ ಔಷಧಿ ಪೂರೈಕೆ ಬಗ್ಗೆ ಸದಾನಂದಗೌಡರ ಜೊತೆ ಮಾತುಕತೆ ನಡೆಸಲಾಗಿದೆ. ಈಗಾಗಲೇ 1030 ವಯಲ್ಸ್ ನಮಗೆ ಮಂಜೂರು ಮಾಡಿದ್ದು, ಇನ್ನು ಹೆಚ್ಚಿನ ಔಷಧಿಯನ್ನು ಕಳುಹಿಸಿಕೊಡುವ ಭರವಸೆಯನ್ನು ಅವರು ಕೊಟ್ಟಿದ್ದಾರೆ. ಬೆಂಗಳೂರು, ಧಾರವಾಡದಲ್ಲಿ ಬ್ಲ್ಯಾಕ್ಸ್ ಫಂಗಸ್ ಹೆಚ್ಚಿದೆ. ಇಲ್ಲಿ ವಿಶೇಷ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿಯೂ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಮಕ್ಕಳಿಗೆ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವಿಶೇಷ ಸವಲತ್ತು ಕಲ್ಪಿಸಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ನೀಡಲು ಸೂಚನೆ ನೀಡಲಾಗಿದೆ ಎಂದರು.
ಇಂದು ಸಂಜೆ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಕೊರೊನಾ ಸ್ಥಿತಿಗತಿ, ಸೋಂಕು ಹರಡುವಿಕೆ, ಎಲ್ಲಿ ನಿಯಂತ್ರಣ ಮಾಡಬೇಕು, ಅದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆಯಾಗಲಿದೆ. ಬ್ಲ್ಯಾಕ್ ಫಂಗಸ್ ಮತ್ತು ಮಕ್ಕಳಿಗೆ ಕೊರೊನಾ ಬರುತ್ತಿದೆ ಇದರ ಬಗ್ಗೆ ಪ್ರಾಥಮಿಕವಾಗಿ ವೈದ್ಯರಿಂದ ವರದಿ ಪಡೆದು ಅದರ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸಿಡಿ ಕೇಸ್ ಬಗ್ಗೆ ಪ್ರತಿಕ್ರಿಯೆ ಇಲ್ಲ: ಸಿಡಿ ಪ್ರಕರಣದ ಆರೋಪ ಹೊತ್ತ ಮಾಜಿ ಸಚಿವರು ಹೇಳಿಕೆ ಬದಲಿಸಿ ತನಿಖಾಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂಬ ವಿಚಾರವಾಗಿ ಗೃಹ ಸಚಿವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಮಾಜಿ ಸಚಿವರೊಬ್ಬರ ಸಿಡಿ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಮಾಡುವ ಸಂದರ್ಭದಲ್ಲಿ ನಾವು ಯಾವುದೇ ರೀತಿಯ ಹೇಳಿಕೆ, ಪ್ರತಿಕ್ರಿಯೆಯ ಕೊಡಲು ಇಷ್ಟಪಡುವುದಿಲ್ಲ ಎಂದರು.