ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 'ಏಜೆಂಟ್' ಪದ ಬಳಕೆ ಮಾಡಿರುವುದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಂಡಿಸಿದ್ದಾರೆ.
ಪೊಲೀಸ್ ಕಮೀಷನರ್ ಅವರನ್ನು ಏಜೆಂಟ್ ಎಂದು ಕರೆದಿರುವುದು ಗಲಭೆಕೋರರನ್ನು ಪರೋಕ್ಷವಾಗಿ ರಕ್ಷಣೆ ಮಾಡುವ ಮತ್ತೊಂದು ತಂತ್ರವಾಗಿದೆ. ಆದರೆ, ಇದು ಯಾವುದೂ ನಡೆಯುವುದಿಲ್ಲ ಎಂದು ಗೃಹ ಸಚಿವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಗಲಭೆಯ ವಿಡಿಯೋಗಳಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪೊಲೀಸ್ ಆಯುಕ್ತರು ಕೈಗೊಂಡ ಕ್ರಮಕ್ಕೆ ರಾಜ್ಯದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರನ್ನು ಏಜೆಂಟರನ್ನಾಗಿ ನಡೆಸಿಕೊಳ್ಳುವುದು ಅವರ ಸಂಸ್ಕೃತಿ. ಆದರೆ, ನಮ್ಮ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದಾರೆ. ಇದರಲ್ಲಿ ಯಾರದೇ ಪ್ರಭಾವ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.