ಬೆಂಗಳೂರು: ಪ್ರಧಾನಿ ಮೋದಿಯವರು ಹೇಳಿರುವಂತೆ 2023ಕ್ಕೆ ದೇಶದ ಪ್ರತಿಯೊಬ್ಬರಿಗೂ ಸೂರು ಎಂಬ ಕಲ್ಪನೆಯಡಿಯಲ್ಲಿ ರಾಜ್ಯದಲ್ಲಿ ಸಿಎಂ ಬಿಎಸ್ವೈ ಸೂಚನೆ ಮೇರೆಗೆ ಗೃಹ ಇಲಾಖೆಗೆ ಕಾಯಕಲ್ಪ ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗೃಹ ಮಂಡಳಿ ಹೊರತಂದಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 65 ಬಡಾವಣೆಗಳ ನಕ್ಷೆ ಮಂಜಾರಾತಿಯನ್ನು 21 ವರ್ಷದ ತದನಂತರ ಮಾಡಿದ್ದು, ಸಾಮಾನ್ಯ ಜನರಿಗೆ ನಿವೇಶನ ನೀಡುವ ಕಾರ್ಯ ಮಾಡಿದ್ದೇವೆ ಎಂದರು.
ಸಾಮಾನ್ಯರಿಗೆ ಕಡಿಮೆ ದರದಲ್ಲಿ ವಸತಿ ಸಿಗುವ ಹಾಗೆ ಜಿಗಣಿ ಇಂಡಸ್ಟ್ರಿಯಲ್ ಏರಿಯಾ ಪಕ್ಕದಲ್ಲಿ ಸಾವಿರಾರು ಮನೆಗಳನ್ನು ಒಳಗೊಂಡ ಟೌನ್ಶಿಪ್ ಮಾಡಿದ್ದಾರೆ. ಮಾರ್ಚ್ನಲ್ಲಿ ಪ್ರಧಾನಿ ಟೌನ್‌ಶಿಪ್‌ಗೆ ಚಾಲನೆ ನೀಡುತ್ತೇವೆ. 7,700 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ವಸತಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ 30 ಸಾವಿರ ಮನೆಗಳು ಈಗಾಗಲೇ ರೆಡಿಯಾಗುತ್ತಿವೆ. ನಾಳೆ ಬೆಳಗ್ಗೆ ಈ ಬಗ್ಗೆ ಪರಿಶೀಲನೆಗೆ ಹೋಗುತ್ತಿದ್ದೇನೆ. ಮಾರ್ಚ್ 30ರಿಂದ ಏಪ್ರಿಲ್‌ನೊಳಗೆ ಸ್ಲಂ ಬೋರ್ಡ್‌ನಿಂದ 40 ಸಾವಿರ ಮನೆಗಳನ್ನು ನೀಡಲಾಗುತ್ತದೆ ಎಂದರು.
ಮುಂದಿನ ವರ್ಷದಿಂದ ಕರ್ನಾಟಕ ಗೃಹ ಮಂಡಳಿ ಕೈಪಿಡಿ ನೂರಕ್ಕೆ ನೂರರಷ್ಟು ಕನ್ನಡದಲ್ಲೇ ಇರಬೇಕು ಎಂದು ಸೂಚಿಸಿದ ಸೋಮಣ್ಣ, ಮುದ್ರಣ ಗುಣಮಟ್ಟದಲ್ಲಿಯೂ ಒಂದಿಷ್ಟು ಉತ್ತಮವಾದ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದರು. ಇದೇ ವೇಳೆ ಕೆಹೆಚ್‌ಬಿ ಅಧ್ಯಕ್ಷ ಅರಗ ಜ್ಞಾನೇಂದ್ರ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.