ಬೆಂಗಳೂರು: ಪಕ್ಷ ದ್ರೋಹ ಕೆಲಸ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಬೇಕಿದೆ ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಗರಂ ಆಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿರೇಕೆರೂರು ಮುಖಂಡರ ಸಭೆ ಮುಕ್ತಾಯದ ನಂತರ ಮಾತನಾಡಿದ ಅವರು, ಉಪಚುನಾವಣೆ ಬಗ್ಗೆ ಚರ್ಚೆ ಮಾಡುವುದಕ್ಕೆ ನಮ್ಮನ್ನು ಕರೆದಿದ್ರು. ಹಿರೇಕೆರೂರು ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಅಲ್ಲಿಗೆ ನಾವು ಹೋಗಿ ಮುಖಂಡರ ಅಭಿಪ್ರಾಯ ಪಡೆದು ಬಂದಿದ್ದು, ವರದಿ ನೀಡಿದ್ದೇವೆ ಎಂದರು.
'ರಾಜ್ಯದ ಜನರಿಗಾದ ನಷ್ಟಕ್ಕೆ ಪರಿಹಾರ ಕೊಡಲಿ'
ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ. ರಾಜ್ಯದಲ್ಲಿ ಜನರಿಗೆ ಆದ ನಷ್ಟವನ್ನು ಆದಷ್ಟು ಬೇಗ ತುಂಬಿಕೊಡುವ ಕೆಲಸವನ್ನು ಇವರು ಮಾಡಲಿ. ರಾಜ್ಯದಲ್ಲಿ ಬರ, ನೆರೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ವಂಚನೆಯಾಗುತ್ತಿದೆ, ಇದನ್ನು ಸರ್ಕಾರಗಳು ತಪ್ಪಿಸಲಿ ಎಂದರು.
ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವ ಕಾರ್ಯ ಸರ್ಕಾರದಿಂದ ಆಗಿಲ್ಲ. ನೆರೆಯ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿ ತಿರಸ್ಕೃತವಾಗಿದೆ ಎಂಬ ಮಾಹಿತಿ ಇದೆ. ಸರಿಯಾಗಿ ಕೇಂದ್ರಕ್ಕೆ ವರದಿ ಸಲ್ಲಿಸಲು ಕೂಡ ಸರ್ಕಾರದಿಂದ ಸಾಧ್ಯವಾಗಿಲ್ಲ. ನೆರೆಯ ಬಗ್ಗೆ ನಿರ್ಲಕ್ಷ್ಯ ತಾಳಿದ್ದು ಬರದ ಬಗ್ಗೆ ಗಮನವನ್ನು ಕೂಡ ಇನ್ನು ಹರಿಸಿಲ್ಲ. ಪ್ರತಿಪಕ್ಷವಾಗಿ ಜನರಿಗೆ ಇವರ ಲೋಪವನ್ನು ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ. ಸರ್ಕಾರದಿಂದ ಜನರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಎನ್ನುವ ಭಾವನೆ ನನ್ನದು ಎಂದರು.