ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನದ ಮೃಗಾಲಯದಲ್ಲಿ ಹಿಮಾಲಯನ್ ಕರಡಿಯೊಂದು ಸಾವನ್ನಪ್ಪಿದೆ. ಗುರುವಾರ 27 ವರ್ಷ ಪ್ರಾಯದ ‘ಮೋಹನ್’ ಎಂಬ ಕರಡಿ ಮೃತಪಟ್ಟಿದೆ. ಈ ಕರಡಿಯು ವಯೋಸಹಜವಾಗಿ ಲಿಂಪೋ ಸಾರ್ಕೋಮಾ ಎಂಬ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದೆ.
ಕರಡಿಗಳ ಆಯಸ್ಸು ಸುಮಾರು 25ರಿಂದ 30 ವರ್ಷಗಳಾಗಿದೆ. ಕರಡಿ ಮೋಹನ್ ಕಳೆದ 15 ದಿನಗಳಿಂದ ತೀವ್ರ ಅನಾರೋಗದಿಂದ ಬಳಲುತ್ತಿತ್ತು. ಚಿಕಿತ್ಸೆ ನೀಡಲಾಗುತ್ತಿತ್ತಾದರೂ ನಿನ್ನೆ ಸ್ಫಂದಿಸದೆ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಮಾಲಯದ ಕಪ್ಪು ಕರಡಿಯನ್ನು 2002ರ ಮೇ 10ರಂದು ಬೆಳಗಾವಿಯ ನ್ಯೂ ಗ್ರ್ಯಾಂಡ್ ಸರ್ಕಸ್ನಿಂದ ಸಂರಕ್ಷಿಸಿ, ಬನ್ನೇರುಘಟ್ಟ ಮೃಗಾಲಯಕ್ಕೆ ಕರೆತಂದು ಸಲಹಲಾಗಿತ್ತು.
ಸಾವನ್ನಪ್ಪಿರುವ ಕರಡಿಯ ಮರಣೋತ್ತರ ಪರೀಕ್ಷೆಗೆ ಅಂಗಾಂಗಗಳ ಮಾದರಿಯನ್ನು ಐಎಹೆಚ್ ಮತ್ತು ವಿಬಿ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ. ವರದಿ ಬಂದ ಬಳಿಕ ಸಾವಿಗೆ ನಿಖರ ವೈಜ್ಞಾನಿಕ ಕಾರಣಗಳು ತಿಳಿದು ಬರಲಿದೆ.
ಇದನ್ನೂ ಓದಿ: ಶಿವಮೊಗ್ಗ ಹುಲಿ - ಸಿಂಹಧಾಮದ 'ರಾಮ' ಹುಲಿ ಸಾವು: ಐದಕ್ಕಿಳಿದ ವ್ಯಾಘ್ರರ ಸಂಖ್ಯೆ