ಬೆಂಗಳೂರು: ರೈತರನ್ನು ದೇಹದ್ರೋಹಿಗಳಿಗೆ ಹೋಲಿಸಿ ಟ್ವೀಟ್ ಮಾಡಿದ್ದ ಆರೋಪಡಿ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ನಟಿ ಕಂಗನಾ ರಣಾವತ್ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ತುಮಕೂರು ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಖಾಸಗಿ ದೂರು ಆಧರಿಸಿ ನ್ಯಾಯಾಲಯ ನೀಡಿದ್ದ ಆದೇಶದ ಮೇರೆಗೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಎಚ್.ಪಿ. ಸಂದೇಶ್ ಅವರಿದ್ದ ಪೀಠ, ತುಮಕೂರಿನ ಕ್ಯಾತಸಂದ್ರ ಠಾಣೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿರುವ ಪೀಠ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿದೆ.
ಅಲ್ಲದೇ, ಜೆಎಂಎಫ್ಸಿ ಕೋರ್ಟ್ ಹೊರಡಿಸಿರುವ ವಾರಂಟ್ ಸಂಬಂಧ ರಕ್ಷಣೆ ಕೋರಿರುವ ಮಧ್ಯಂತರ ಮನವಿಯನ್ನು ಮುಂದಿನ ವಿಚಾರಣೆ ವೇಳೆ ಪರಿಶೀಲಿಸುವುದಾಗಿ ಹೇಳಿರುವ ಪೀಠ, ಪ್ರತಿವಾದಿಗಳಿಗೆ ಅರ್ಜಿಯ ಪ್ರತಿ ಸಲ್ಲಿಸುವಂತೆ ಸೂಚಿಸಿದೆ.
ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿರುವ ರೈತರನ್ನು ನಟಿ ಕಂಗನಾ ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್ ಮಾಡಿದ್ದರು. ಈ ಸಂಬಂಧ ತುಮಕೂರಿನ ವಕೀಲ ರಮೇಶ್ ಎಲ್. ನಾಯಕ್ ಸ್ಥಳೀಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿ, ನಟಿ ವಿರುದ್ಧ ಕ್ರಮಕ್ಕೆ ಕೋರಿದ್ದರು. ಅದರಂತೆ, ನ್ಯಾಯಾಲಯ ಕ್ಯಾತಸಂದ್ರ ಠಾಣೆ ಪೊಲೀಸರಿಗೆ ಎಫ್ಐಆರ್ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿತ್ತು. ಆ ಬಳಿಕ ನಟಿ ಕಂಗನಾ ಪ್ರಕರಣ ರದ್ದುಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.