ಬೆಂಗಳೂರು : ಚಿತ್ರದುರ್ಗದ ಮುರುಘಾ ಮಠದ ಆಸ್ತಿ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ದಾವೆಯಲ್ಲಿ ತಮ್ಮ ಮಧ್ಯಂತರ ಅರ್ಜಿಯನ್ನು ಪರಿಗಣಿಸುವಂತೆ ನಿರ್ದೇಶನ ಕೋರಿ ಮಠದ ಭಕ್ತರೊಬ್ಬರು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಬೃಹನ್ ಮಠದ ಪೀಠಾಧಿಪತಿ ಜಗದ್ಗುರು ಮುರುಘ ರಾಜೇಂದ್ರ ಶರಣರಿಗೆ ನೋಟಿಸ್ ಜಾರಿ ಮಾಡಿದೆ.
ಮರುಘಾ ಶರಣರನ್ನು ಮಠಾಧಿಪತಿ ಹುದ್ದೆಯಲ್ಲಿ ಮುಂದುವರೆಯದಂತೆ ನಿರ್ಬಂಧಿಸಲು ಕೋರಿ ಸಲ್ಲಿಸಿರುವ ಮೂಲ ದಾವೆಯಲ್ಲಿ ತಮ್ಮ ಮಧ್ಯಂತರ ಅರ್ಜಿಯನ್ನು ಪರಿಗಣಿಸದ ಬೆಂಗಳೂರಿನ 56ನೇ ಸಿಸಿಹೆಚ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಠದ ಭಕ್ತರೂ ಆಗಿರುವ ವಿಜಯಪುರ ಜಿಲ್ಲೆಯ ವಿಜಯಕುಮಾರ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಮಠಾಧಿಪತಿ ಮುರುಘಾ ಶರಣರೂ ಸೇರಿದಂತೆ ಎಲ್ಲ ಏಳು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.
ಪ್ರಕರಣದ ಹಿನ್ನೆಲೆ : ಮಠಾಧಿಪತಿ ಜಗದ್ಗುರು ಮುರುಘ ರಾಜೇಂದ್ರ ಶರಣರು ಬೃಹನ್ಮಠದ ಆಸ್ತಿ ಹಾಗೂ ಭಕ್ತರ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಮಾಡಿದ್ದ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ, ವಿಶ್ವನಾಥ ಹಿರೇಮಠ, ರುದ್ರೇಶ್ ಅವರು ಮುರುಘಾ ಶರಣರನ್ನು ಮಠಾಧಿಪತಿ ಸ್ಥಾನದಲ್ಲಿ ಮುಂದೆವರೆಯದಂತೆ ನಿರ್ಬಂಧಿಸಲು ಕೋರಿ ಬೆಂಗಳೂರಿನ 56ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಈ ದಾವೆಯಲ್ಲಿ ತಮ್ಮನ್ನು 5ನೇ ಪ್ರತಿವಾದಿಯಾಗಿ ಪರಿಗಣಿಸುವಂತೆ ಕೋರಿ ವಿಜಯ್ ಕುಮಾರ್ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿಜಯ್ ಕುಮಾರ್ ಅವರ ಅರ್ಜಿ ವಜಾ ಮಾಡಿತ್ತು. ವಿಚಾರಣಾ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ವಿಜಯ್ ಕುಮಾರ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ, ತಾವು ಕೂಡ ಮಠದ ಭಕ್ತರಾಗಿದ್ದು, ಪ್ರಕರಣದಲ್ಲಿ ಭಾಗಿಯಾಗುವ ಅರ್ಹತೆ ಇದೆ. ಹೀಗಾಗಿ, ತಮ್ಮನ್ನು ಪ್ರತಿವಾದಿಯಾಗಿ ಪರಿಗಣಿಸದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು. ಮಧ್ಯಂತರ ಅರ್ಜಿಯನ್ನು ಪರಿಗಣಿಸುವಂತೆ ನಿರ್ದೇಶಿಸಬೇಕು. ಅಲ್ಲಿಯವರೆಗೆ ಮೂಲ ದಾವೆಯ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ವಿಜಯ್ ಕುಮಾರ್ ಕೋರಿದ್ದಾರೆ.