ಬೆಂಗಳೂರು : ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಚನ್ನಪಟ್ಟಣ ನಿವಾಸಿಗಳಾದ ಎಂ ಕೆ ಚಂದ್ರಶೇಖರ್ ಹಾಗೂ ಇತರೆ 14 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ನಗಾರಭಿವೃದ್ಧಿ ಇಲಾಖೆ ಕಾರ್ಯದರ್ಶಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಚನ್ನಪಟ್ಟಣ ನಗರ ಸಭೆ ಆಯುಕ್ತ ಮತ್ತು ರಾಮನಗರ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದೆ.
ಅರ್ಜಿದಾರರ ಕೋರಿಕೆ : ನಗರದ ಜನ ವಸತಿ ಹಾಗೂ ಕೈಗಾರಿಕೆಗಳ ಕಲ್ಮಷ ನೀರನ್ನು ಸಂಸ್ಕರಿಸದೆ ಚರಂಡಿಗಳ ಮೂಲಕ ಹರಿಯಲು ಬಿಟ್ಟದ್ದು, ಅದು ಕಣ್ವ ನದಿಯೊಂದಿಗೆ ಸೇರಿ ರಾಮಮ್ಮನ ಕೆರೆ, ಕುಡ್ಲೂರು, ಕುನ್ನೇರಕಟ್ಟೆ, ಸುಣ್ಣಘಟ್ಟ ಕೆರೆಗಳಿಗೆ ಸೇರುತ್ತಿದೆ. ಈ ಕೆರೆಗಳು ತಾಲೂಕಿನ ರೈತರ ಜೀವನಾಡಿಗಳಾಗಿವೆ.
ಈ ಭಾಗದ ಜನರು ಕುಡಿಯುವ ನೀರಿಗಾಗಿ ಬೋರ್ವೆಲ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಕಲುಷಿತ ನೀರಿನಿಂದ ಅಂತರ್ಜಲ ಹಾಳಾಗುತ್ತಿದೆ. ಮಾಲಿನ್ಯ ತಡೆಗೆ ಕ್ರಮಕೈಗೊಳದಿದ್ದರೆ ಜನರ ಆರೋಗ್ಯ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ. ಜತೆಗೆ ಕಲುಷಿತ ನೀರು ಇದೇ ರೀತಿ ಕಣ್ವ ನದಿ ಸೇರುತ್ತಿದ್ದರೆ ಮುಂದೆ ಬೆಂಗಳೂರಿನ ವೃಷಭಾವತಿ ನದಿಯಂತಾಗುವ ಆಪಾಯವಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಚನ್ನಪಟ್ಟಣ ಕುರಕುಶಲ ವಸ್ತುಗಳ ತಯಾರಿಕೆಗೆ, ರೇಷ್ಮೆ ಮತ್ತು ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ರೇಷ್ಮೆ ರೀಲಿಂಗ್ ಸೇರಿದಂತೆ ಹಲವು ಕೈಗಾರಿಕೆಗಳಿವೆ. ಈ ಕೈಗಾರಿಕೆಗಳು ಸಂಸ್ಕರಿಸದೆ ಹೊರ ಬಿಡುವ ಕಲುಷಿತ ನೀರು ಕೆರೆಗಳಿಗೆ ಹೋಗುವುದನ್ನು ತಡೆಯುವಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು ವಿಫಲವಾಗಿವೆ. ಪ್ರಸ್ತುತ 31 ವಾರ್ಡ್ಗಳಿರುವ ಚನ್ನಪಟ್ಟಣ ನಗರವನ್ನು ವಿಸ್ತರಿಸಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ. ಆದರೆ, ಒಳಚರಂಡಿ ವ್ಯವಸ್ಥೆಯನ್ನೇ ಕಲ್ಪಿಸದೆ ನಗರ ವಿಸ್ತರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಿಬೇಕು ಎಂದು ಅರ್ಜಿದಾರರು ಕೋರಿದ್ದಾರೆ.