ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್‌ಗಳ ತೂಕ ಇಳಿಕೆಗೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ(ರುಪ್ಸಾ)ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ತುಮಕೂರಿನ ವಕೀಲ ರಲ್ಲ ರಮೇಶ್ ನಾಯಕ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ಪೀಠ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜ್ಯದಲ್ಲಿ ಶಾಲಾ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಕಾನೂನು, ನಿಯಮಗಳಿವೆ. ಸರ್ಕಾರವೂ ಆಗಾಗ ಸೂಚನೆ, ಸುತ್ತೋಲೆಗಳನ್ನು ಹೊರಡಿಸುತ್ತಲೇ ಇದೆ. ಆದರೆ, ಶಾಲಾ ಬ್ಯಾಗ್ ಸಂಬಂಧ ಯಾವುದೇ ನಿರ್ದಿಷ್ಟ ನಿಯಮ ರೂಪಿಸಿಲ್ಲ. 2006ರಲ್ಲಿ ರಾಜ್ಯಸಭೆಯಲ್ಲಿ ಶಾಲಾ ಮಕ್ಕಳ ಬ್ಯಾಗ್ ತೂಕ ಮಿತಿಗೊಳಿಸುವ ಕುರಿತಂತೆ ವಿಧೇಯಕವನ್ನು ಮಂಡಿಸಲಾಗಿತ್ತು. ಆದರೆ, ನಂತರ ಅದನ್ನು ಅಲ್ಲಿಗೆ ಕೈಬಿಡಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಶಾಲಾ ಬ್ಯಾಗ್ ನೀತಿ 2020ರಲ್ಲಿ ಮಕ್ಕಳ ಬ್ಯಾಗ್ ತೂಕದ ಮಿತಿ ಇಷ್ಟೇ ಇರಬೇಕು ಎಂಬ ನಿಯಮ ಜಾರಿಗೊಳಿಸಿದೆ. ಆದರೆ ಅದು ಪಾಲನೆಯಾಗುತ್ತಿಲ್ಲ. ನಗರ/ಪಟ್ಟಣಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಆ ತೂಕದ ಬ್ಯಾಗ್‌ಗಳನ್ನು ಹೊತ್ತು ಪ್ರತಿದಿನವೂ ಶಾಲೆಗೆ ಹೋಗುವುದು ಸಾಮಾನ್ಯ ದೃಶ್ಯವಾಗಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೇ ಆರೋಗ್ಯ ತಜ್ಞರ ನಾನಾ ಅಧ್ಯಯನಗಳ ಪ್ರಕಾರ, ಭಾರಿ ತೂಕದ ಶಾಲಾ ಬ್ಯಾಗ್ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಜತೆಗೆ ಬ್ಯಾಗ್ ಹೊರುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಅವರ ಬೆನ್ನು ಮತ್ತು ಕಾಲಿಗೆ ಹಾನಿಯಾಗುತ್ತದೆ. ಹಾಗಾಗಿ ಈ ಕುರಿತು ಸಂವಿಧಾನದ ಕಲಂ 21ರಡಿ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಓದಿ: ಮೀಸಲಾತಿ ಹೆಚ್ಚಳ ಕುರಿತು ಚರ್ಚೆ: ಒಂದು ವಾರದಲ್ಲಿ ಸರ್ವಪಕ್ಷ ಸಭೆ ಕರೆದು ತೀರ್ಮಾನ ಎಂದ ಸಿಎಂ