ಬೆಂಗಳೂರು : ಆಗಸ್ಟ್ 24ರಂದು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆಯಲಿರುವ ಪೂರ್ವಭಾವಿ ಪರೀಕ್ಷೆಯಲ್ಲಿ ಅಂಧ ಅಭ್ಯರ್ಥಿಗಳಿಗೆ ಹೆಚ್ಚುವರಿ 20 ನಿಮಿಷ ಸಮಯಾವಕಾಶ ನೀಡುವಂತೆ ಹೈಕೋರ್ಟ್ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನಿರ್ದೇಶಿಸಿದೆ.
ದಿ ನ್ಯಾಷನಲ್ ಫೆಡರೇಷನ್ ಆಫ್ ಬ್ಲೈಂಡ್ ಹೆಸರಿನ ಎನ್ ಜಿಓ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಪರೀಕ್ಷೆಗೆ ಹಾಜರಾಗಲಿರುವ ಎಲ್ಲಾ ಅಂಧ ಅಭ್ಯರ್ಥಿಗಳಿಗೆ ಹೆಚ್ಚುವರಿ 20 ನಿಮಿಷ ಕಾಲಾವಕಾಶ ನೀಡಬೇಕು ಎಂದು ಸೂಚಿಸಿದೆ. ಅಲ್ಲದೇ ಪರೀಕ್ಷೆ ದಿನಾಂಕ ಈಗಾಗಲೇ ನಿಗದಿಯಾಗಿರುವುದರಿಂದ ಅಂಧ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ನೆರವು ನೀಡಲು ಸಹಾಯಕರನ್ನು ಒದಗಿಸಿರುವ ಕುರಿತು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಪರೀಕ್ಷೆ ನಡೆದ ಬಳಿಕ ಈ ಬಗ್ಗೆ ಪರಿಶೀಲಿಸಲಾಗುವುದು. ಒಂದು ವೇಳೆ ಪರೀಕ್ಷೆ ನಿಯಮ ಬಾಹಿರವಾಗಿ ನಡೆದಲ್ಲಿ ಪರಿಶೀಲಿಸಿ ಕ್ರಮಕ್ಕೆ ಸೂಚಿಸಲಾಗುವುದು ಎಂದು ಪೀಠ ತಿಳಿಸಿದೆ.
ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಜೈನಾ ಕೊಥಾರಿ, ಕೇಂದ್ರ ಸರ್ಕಾರ ರೂಪಿಸಿರುವ ನೇಮಕಾತಿ ಪರೀಕ್ಷಾ ನಿಯಮಗಳ ಅನುಸಾರ ಅಂಧ ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರಗಳೆ ಸಹಾಯಕರನ್ನು ಒದಗಿಸಬೇಕು. ಆದರೆ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಸಹಾಯಕರನ್ನು ಕರೆದುಕೊಂಡು ಬರಲು ಸೂಚಿಸಿದೆ. ಕೊರೊನಾದಿಂದ ಸಹಾಯಕರಾಗಿ ಬರಲು ಯಾರೂ ಮುಂದಾಗುತ್ತಿಲ್ಲ. ಪರಿಣಾಮ ಅಭ್ಯರ್ಥಿಗಳು ತೀವ್ರ ತೊಂದರೆಗೆ ಸಿಲುಕುವಂತಾಗಿದೆ ಎಂದು ಪೀಠಕ್ಕೆ ವಿವರಿಸಿದರು.
ಅಂಧ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯಾವಕಾಶ ಅಗತ್ಯವಿದ್ದು, ಅಭ್ಯರ್ಥಿಗಳು ಮನವಿ ಮಾಡಿದ್ದರೂ ಕೆಪಿಎಸ್‌ಸಿ ಪುರಸ್ಕರಿಸಿಲ್ಲ. ಇದು ಪರೀಕ್ಷಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.