ಬೆಂಗಳೂರು: ನಿಗದಿತ ಅವಧಿಯೊಳಗೆ ಚುನಾವಣಾ ಆಯೋಗಕ್ಕೆ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿಯನ್ನು ಸಿದ್ಧಪಡಿಸಿ ಕೊಡದಿದ್ದರೆ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮುಂಬರುವ ಸೆಪ್ಟೆಂಬರ್ 10ರ ಒಳಗೆ ಚುನಾವಣೆ ನಡೆಸಬೇಕಿದೆ. ಹೀಗಿದ್ದರೂ ಅಗತ್ಯವಿರುವ ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲು ಕ್ಷೇತ್ರಗಳ ಪಟ್ಟಿಯನ್ನು ಸಲ್ಲಿಸದ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ರಿಟ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಚುನಾವಣಾ ಆಯೋಗದ ಪರ ವಕೀಲರು ವಾದಿಸಿ, ವಾರ್ಡ್ ವಿಂಗಡಣೆ ಮತ್ತು ಮೀಸಲು ಪಟ್ಟಿ ನೀಡುವಲ್ಲಿ ಸರ್ಕಾರದ ವಿಳಂಬ ಧೋರಣೆ ಕುರಿತು ವಿವರಿಸಿದರು. ಹಿಂದೆ 2015ರ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಕೂಡ ಸರ್ಕಾರ ಇದೇ ರೀತಿ ನಡೆದುಕೊಂಡಿತ್ತು. ಹಾಗೆಯೇ ಪ್ರಸ್ತುತ ಜನಸಂಖ್ಯೆಯನ್ನು ಆಧರಿಸಿ ಪಟ್ಟಿ ಸಿದ್ಧಪಡಿಸದ ಸರ್ಕಾರ 2001ರ ಜನಗಣತಿ ಆಧಾರದಲ್ಲಿ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಕ್ಷೇತ್ರಗಳನ್ನು ಸಿದ್ಧಪಡಿಸಿತ್ತು ಎಂಬ ವಿಚಾರಗಳನ್ನು ಪೀಠದ ಗಮನಕ್ಕೆ ತಂದರು.
ಇದಕ್ಕೂ ಮುನ್ನ ಸರ್ಕಾರದ ಪರ ವಕೀಲರು ವಿವರಣೆ ನೀಡಿ, ಚುನಾವಣಾ ಆಯೋಗಕ್ಕೆ ಪಟ್ಟಿ ಸಿದ್ಧಪಡಿಸಿ ಕೊಡಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಕಾರ್ಯಾರಂಭ ಮಾಡಿದ್ದು, ಮೀಸಲು ಪಟ್ಟಿ ಸಿದ್ಧಪಡಿಸಲು ಕಾಲಾವಕಾಶ ಬೇಕಾಗಿದೆ. ಹೀಗಾಗಿ ಜೂನ್ ಅಂತ್ಯದವರೆಗೆ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ಪೀಠ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಂವಿಧಾನದ ಅನುಚ್ಛೇದ 203(ಕೆ) ಅಡಿ ಸ್ಥಾಪಿಸಿರುವ ಚುನಾವಣಾ ಆಯೋಗಕ್ಕೆ ಪೂರಕ ಕೆಲಸ ಮಾಡಿಕೊಡಬೇಕಿರುವುದು ಸರ್ಕಾರದ ಶಾಸನಬದ್ಧ ಕರ್ತವ್ಯ. ಆದರೆ ಸರ್ಕಾರ ಕೆಲಸ ಮಾಡದೇ ಚುನಾವಣಾ ಆಯೋಗ ಕೋರ್ಟ್ ಮೆಟ್ಟಲೇರುವಂತೆ ಮಾಡಿರುವುದು ಅದರ ಬೇಜವಾಬ್ದಾರಿ ನಡೆಗೆ ಸಾಕ್ಷಿಯಾಗಿದೆ.
ಸರ್ಕಾರದ ಈ ನಡವಳಿಕೆ ಆಕ್ಷೇಪಾರ್ಹವಾಗಿದ್ದು, ನಿಗದಿತ ಅವಧಿಯಲ್ಲಿ ಪಟ್ಟಿ ಸಿದ್ಧಪಡಿಸಿಕೊಡದಿದ್ದರೆ ಭಾರಿ ದೊಡ್ಡ ಮೊತ್ತದ ದಂಡ ವಿಧಿಸಬೇಕಾಗುತ್ತದೆ. ಕನಿಷ್ಠ ಎಂದರೂ ಹತ್ತು ಲಕ್ಷ ದಂಡ ಹಾಕುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲು ಕ್ಷೇತ್ರ ಪಟ್ಟಿ ಸಿದ್ಧಪಡಿಸಲು 2011ರ ಜನಗಣತಿ ವರದಿ ಪರಿಗಣಿಸಬೇಕು. ಪಟ್ಟಿ ಸಿದ್ಧಪಡಿಸಲು ಸರ್ಕಾರ ಯಾವಾಗ ಕೆಲಸ ಆರಂಭಿಸಿದೆ ಹಾಗೂ ಯಾವಾಗ ಮುಗಿಯಲಿದೆ ಎಂಬುದನ್ನು ಮಾರ್ಚ್ 3ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಿದೆ.