ಬೆಂಗಳೂರು: ನಗರದ ರಸ್ತೆಗಳ ಗುಣಮಟ್ಟ ಕಾಪಾಡಿಕೊಳ್ಳದಿದ್ದರೆ ರಸ್ತೆಗಳ ನಿರ್ವಹಣೆ ಹೊಣೆಯಲ್ಲಿ ಮಿಲಿಟರಿ ಇಂಜಿನಿಯರ್ಗಳಿಗೆ ವಹಿಸಬೇಕಾಗುತ್ತದೆ ಎಂದು ಹೈಕೋರ್ಟ್ ಬಿಬಿಎಂಪಿ ಪ್ರಧಾನ ಇಂಜಿನಿಯರ್ಗೆ ಮೌಖಿಕವಾಗಿ ಎಚ್ಚರಿಕೆ ನೀಡಿದೆ.
ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ನಗರದ ವಿಜಯನ್ ಮೆನನ್ ಹಾಗೂ ಇತರ ಮೂವರು 2015ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ಧ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ಬಿಬಿಎಂಪಿ ಪ್ರಧಾನ ಇಂಜಿನಿಯರ್ ಹಾಜರಾಗದೇ ಇದ್ದುದಕ್ಕೆ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಪ್ರಧಾನ ಇಂಜಿನಿಯರ್ ಎಸ್. ಪ್ರಭಾಕರ್ ವಿಚಾರಣೆಗೆ ಖುದ್ದು ಹಾಜರಿದ್ದರು. ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರಭಾಕರ್ ನ್ಯಾಯಪೀಠಕ್ಕೆ ಕೈಮುಗಿದು ಬೇಷರತ್ ಕ್ಷಮೆ ಯಾಚಿಸಿದರು.
ಈ ವೇಳೆ, ಬಿಬಿಎಂಪಿ ಕಾರ್ಯವೈಖರಿಯನ್ನ ಖಂಡಿಸಿದ ಪೀಠ, ನಗರದ ರಸ್ತೆಗಳ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಏನು ಕ್ರಮ ಕೈಗೊಂಡಿದ್ದೀರಿ. ನಿಮ್ಮ ಇಂಜಿನಿಯರ್ಗಳೇ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಲೋಪ ಎಸಗಿರುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸದೇ ಕರುಣೆ ತೋರಿದ್ದೇವೆ. ನ್ಯಾಯಾಲಯದ ನಿರ್ದೇಶಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡಿತು.
ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ ವಾದಿಸಿ, ರಸ್ತೆ ಗುಂಡಿಗಳನ್ನು ಸರಿಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪೈಥಾನ್ ಯಂತ್ರ ಬಳಸಲು ಟೆಂಡರ್ ಕರೆದಿದ್ದೇವೆ. 20 ವರ್ಷ ಬಾಳಿಕೆ ಬರುವಂತಹ ರಸ್ತೆಗಳನ್ನು ನಿರ್ಮಿಸಲಾಗುವುದು. ಹಾಗೆಯೇ, ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲೂ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಸ್ತೆಗುಂಡಿಗಳನ್ನು ಮುಚ್ಚಿದ ಬಳಿಕ ನಾವು ಪರಿಶೀಲಿಸುತ್ತೇವೆ. ಗುಣಮಟ್ಟ ಕಾಪಾಡಿಕೊಳ್ಳದೇ ಹೋದರೆ, ರಸ್ತೆಗಳ ನಿರ್ವಹಣೆಯನ್ನು ಮಿಲಿಟರಿ ಇಂಜಿನಿಯರ್ಗಳಿಗೆ ವಹಿಸುತ್ತೇವೆ ಎಂದು ಪ್ರಧಾನ ಇಂಜಿನಿಯರ್ ಪ್ರಭಾಕರ್ ಅವರಿಗೆ ಎಚ್ಚರಿಸಿ, ವಿಚಾರಣೆ ಮುಂದೂಡಿತು.