ಬೆಂಗಳೂರು: ನಗರದ ಘನತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಲ್ಲಿ ವಿಫಲವಾಗುತ್ತಿರುವ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಮತ್ತೆ ಇಂತಹ ನಡೆ ಮರುಕಳಿಸಿದರೇ ಪಾಲಿಕೆಯನ್ನು ಸೂಪರ್ ಸ್ಪೀಡ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ತ್ಯಾಜ್ಯ ನಿರ್ವಹಣೆ ಕುರಿತಂತೆ ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿದೆ.
ಈ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡ್ಗಿ ವಾದಿಸಿ, 'ನಗರದಲ್ಲಿ ನಿತ್ಯ ಸುಮಾರು 2700 ಮೆಟ್ರಿಕ್ ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರ ನಿರ್ವಹಣೆಗೆ ಒಟ್ಟು 8 ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗಿದೆ' ಎಂದು ಪೀಠಕ್ಕೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ನಗರದಲ್ಲಿ ಎಷ್ಟು ಕಸ ಉತ್ಪತ್ತಿಯಾಗುತ್ತದೆ ಮತ್ತು ಹೇಗೆ ನಿರ್ವಹಣೆ ಮಾಡಲಾಗುತ್ತದೆ ಎಂಬ ಬಗ್ಗೆ ಬಿಬಿಎಂಪಿ ಹಾಗೂ ಕೆಎಸ್‌ಪಿಸಿಬಿ ನೀಡಿರುವ ವರದಿಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಈ ಬಗ್ಗೆ ಮುಂದಿನ ಒಂದು ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು. 2019ರಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಎಷ್ಟು ಅರ್ಜಿಗಳು ಬಂದಿವೆ ಎಂಬುದನ್ನು ಮಾಹಿತಿ ನೀಡಬೇಕು. ಒಂದು ವೇಳೆ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪವಾಗಿ ಮಾಡದಿದ್ದರೆ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿತು.