ಬೆಂಗಳೂರು: ಅಪರಾಧ ನಡೆಯಲಿರುವ ಕುರಿತು ರಹಸ್ಯ ಮಾಹಿತಿ ಸಿಕ್ಕಾಗ ಪೊಲೀಸರು ಮೊದಲು ಅಪರಾಧ ನಡೆಯುವುದನ್ನು ತಡೆಯುವ ಅಥವಾ ನಿಯಂತ್ರಿಸುವ ಕೆಲಸ ಮಾಡುವುದು ಮುಖ್ಯವೇ ವಿನಃ ಎಫ್ಐಆರ್ ದಾಖಲಿಸುತ್ತಾ ಕೂರುವುದಲ್ಲ ಎಂದು ಡ್ರಗ್ಸ್ ಮಾರಾಟ ಪ್ರಕರಣವೊಂದರಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಾದಕವಸ್ತು ಮಾರಾಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಕೇರಳದ ಕಣ್ಣೂರು ಮೂಲದ ತಸ್ಲೀಮ್, ಹಸೀಬ್, ರಾಜಿಕ್ ಅಲಿ ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ತೀರ್ಪು ನೀಡಿರುವ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಈ ಆದೇಶ ಪ್ರಕಟಿಸಿದೆ.
ವಾದ-ಪ್ರತಿವಾದ : ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ್ದ ವಕೀಲರು, ಪೊಲೀಸರು ಮಾಹಿತಿ ಸಿಕ್ಕ ನಂತರ ದಾಳಿ ಮಾಡಿದ್ದೇವೆ ಎಂದಿದ್ದಾರೆ. ಆದರೆ, ಮಾಹಿತಿ ಸಿಕ್ಕ ಕೂಡಲೇ ಎಫ್ಐಆರ್ ದಾಖಲಿಸಬೇಕಿತ್ತು. ಆದರೆ, ಪೊಲೀಸರು ಎಫ್ಐಆರ್ ದಾಖಲಿಸದೇ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಸಿಕ್ಕಿವೆ ಎನ್ನಲಾದ ಮಾದಕ ವಸ್ತು ಪ್ರಮಾಣವೆಷ್ಟು ಎಂಬುದರ ಬಗ್ಗೆ ಎಫ್ಎಸ್ಎಲ್ ನಿಗದಿತ ಅವಧಿಯಲ್ಲಿ ವರದಿ ನೀಡಿಲ್ಲ. ಹೀಗಾಗಿ, ಅರ್ಜಿದಾರರಿಗೆ ಎನ್‌ಡಿಪಿಎಸ್ ಕಾಯ್ದೆ ಅನ್ವಯಿಸುವುದಿಲ್ಲ.
ಆದ್ದರಿಂದ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು. ಸರ್ಕಾರದ ಪರ ವಕೀಲರು ವಾದಿಸಿ, ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳ ಮನೆಯಲ್ಲಿ ಮಾದಕ ವಸ್ತು ಲಭ್ಯವಾಗಿದೆ. ಪೊಲೀಸರು ಸೀಜ್ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ನಿಯಮಾನುಸಾರವೇ ನಡೆಸಿದ್ದಾರೆ.
ಲಭ್ಯವಾದ ಮಾದಕ ವಸ್ತುಗಳನ್ನು ಕೊರೊನಾ ಸೋಂಕಿನ ಕಾರಣಕ್ಕಾಗಿ ಕೂಡಲೇ ಎಫ್ಎಸ್ಎಲ್‌ಗೆ ಕಳುಹಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಎಫ್ಎಸ್ಎಲ್ ವರದಿ ಸಿಗುವುದು ತಡವಾಗಿದೆ. ಆರೋಪಿಗಳು ದಂಧೆಯಲ್ಲಿ ಭಾಗಿಯಾಗಿದ್ದು ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.
ಹೈಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು : ವಾದ-ಪ್ರತಿವಾದ ದಾಖಲಿಸಿಕೊಂಡ ಪೀಠ, ಅಪರಾಧ ನಡೆದು ಹೋಗಿದ್ದಾಗ ಆ ಕುರಿತು ಮಾಹಿತಿ ಸಿಕ್ಕ ತಕ್ಷಣ ತಡ ಮಾಡದೆ ಎಫ್ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯ. ಆದರೆ, ಅಪರಾಧ ನಡೆಯುತ್ತಿದೆ ಅಥವಾ ನಡೆಯಲಿದೆ ಎಂಬ ರಹಸ್ಯ ಮಾಹಿತಿ ಸಿಕ್ಕಾಗ, ಆ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅದನ್ನು ತಡೆಯುವುದು ಅಥವಾ ಕ್ರಮ ಜರುಗಿಸುವುದು ಮುಖ್ಯವಾಗುತ್ತದೆಯೇ ವಿನಃ ಮೊದಲೇ ಎಫ್ಐಆರ್ ದಾಖಲಿಸುತ್ತಾ ಕೂರವುದಲ್ಲ. ಹೀಗಾಗಿ, ಪೊಲೀಸರು ಎಫ್ಐಆರ್ ದಾಖಲಿಸದೇ ದಾಳಿ ನಡೆಸಿ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಸರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೆಯೇ, ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ: ಕೇಂದ್ರ ಅಪರಾಧ ವಿಭಾಗದ ಪೊಲೀಸರು 2020ರ ಜೂನ್ 11ರಂದು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಿಟಿಎಂ ಎರಡನೇ ಹಂತದಲ್ಲಿರುವ ಮಾರುತಿ ಡೆಂಟಲ್ ಕಾಲೇಜು ಹಿಂಭಾಗದ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೇರಳದ ಕಣ್ಣೂರಿನ 6 ಮಂದಿ ಯುವಕರು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಾಗ ಬಂಧಿಸಿದ್ದರು. ಎನ್ ಡಿ ಪಿ ಎಸ್ ಕಾಯ್ದೆಯ ಸೆಕ್ಷನ್ 20(ಬಿ), 8(ಸಿ), 22(ಬಿ), 22(ಸಿ) ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಎಲ್ ಎಸ್ ಡಿ ಸ್ಟ್ರಿಪ್ಸ್, ಗಾಂಜಾ, ಎಂಡಿಎಂಎ, ಎಕ್ಸ್ಟೆಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದರು. ಇವರಲ್ಲಿ ಮೂವರು ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.