ಬೆಂಗಳೂರು: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಅಂಜುಮಾನ್ ಇಸ್ಲಾಂ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು,ಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತರ ಆದೇಶವನ್ನು ಎತ್ತಿಹಿಡಿದು ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಅನುಮತಿ ನೀಡಿದ ಹುಬ್ಬಳ್ಳಿ ಧಾರವಾಡ ನಗರಪಾಲಿಕೆ ಆಯುಕ್ತರ ನಿರ್ಧಾರ ಪ್ರಶ್ನಿಸಿ ಅಂಜುಮಾನ್ ಇಸ್ಲಾಂ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನ್ಯಾ. ಅಶೋಕ್ ಎಸ್ ಕಿಣಗಿ ಅವರಿದ್ದ ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ನಡೆಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಈದ್ಗಾ ಮೈದಾನ ಪಾಲಿಕೆ ಆಸ್ತಿ ಎನ್ನುವುದು ನಿರ್ವಿವಾದ. 1973 ರಲ್ಲಿ ಸಿವಿಲ್ ಕೋರ್ಟ್ ಪಾಲಿಕೆ ಪರವಾಗಿ ತೀರ್ಪು ನೀಡಿದೆ. ಮಾಲೀಕತ್ವದ ವಿಚಾರದಲ್ಲಿ ಯಾವುದೇ ಅಡ್ಡಿಯಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿತು.
ಅಂಜುಮಾನ್ ಸಂಸ್ಥೆಗೆ ಯಾವುದೇ ಹಕ್ಕಿಲ್ಲ, ಮೈದಾನ ಪಾಲಿಕೆಯ ಆಸ್ತಿಯಾಗಿದೆ, ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಗೆ ಎಲ್ಲಾ ರೀತಿಯ ಅಧಿಕಾರವಿದೆ ಎನ್ನುವ ಸರ್ಕಾರದ ವಾದವನ್ನು ಪುರಸ್ಕರಿಸಿ ಅಂಜುಮಾನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ಅಂಜುಮಾನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಆಯುಕ್ತರು ಗಣೇಶೋತ್ಸವಕ್ಕೆ ನೀಡಿದ್ದ ಅನುಮತಿಗೆ ಹೈಕೋರ್ಟ್ನಿಂದ ಮಾನ್ಯತೆ ಸಿಕ್ಕಿದ್ದು, ಬೆಳಗ್ಗೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮೊದಲ ಬಾರಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಸರ್ಕಾರದ ಪರ ವಾದ: ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಎಎಜಿ ಧ್ಯಾನ ಚಿನ್ನಪ್ಪ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ಈ ಹಿಂದೆಯೇ ನಡೆದಿದೆ. ವಿಚಾರಣೆ ನ್ಯಾಯಾಲಯವೂ ತೀರ್ಪು ನೀಡಿದೆ ಅಂಜುಮನ್ ಇಸ್ಲಾಂ ವಿರುದ್ಧ ಆದೇಶ ನೀಡಿದೆ. ಯಾವುದೇ ಕಟ್ಟಡ ಕಟ್ಟದಂತೆ ನಿರ್ಬಂಧ ವಿಧಿಸಿದೆ, ಜಾತ್ರೆ ಮತ್ತು ಇನ್ನಿತರೆ ಉದ್ದೇಶಗಳಿಗೆ ಬಳಸಬಹುದು ಎಂದು ಹೇಳಿದೆ. ಅಂಜುಮಾನ್ ಇಸ್ಲಾಂ ಸಲ್ಲಿಸಿದ ಮೇಲ್ಮನವಿಯೂ ವಜಾಗೊಂಡಿದೆ.ಈದ್ಗಾ ಮೈದಾನವನ್ನ ಅಂಜುಮಾನ್ ಇಸ್ಲಾಂಗೆ ಲೀಸ್ ಗೆ ನೀಡಿಲ್ಲ ವರ್ಷದಲ್ಲಿ ಎರಡು ಬಾರಿ ಮಾತ್ರ ನಮಾಜ್ ಮಾಡಲು ಲೈಸೆನ್ಸ್ ನೀಡಲಾಗಿದೆ.
ಇದನ್ನು ಹೊರತುಪಡಿಸಿ ಅಂಜುಮಾನ್ ಸಂಸ್ಥೆಗೆ ಯಾವುದೇ ಹಕ್ಕಿಲ್ಲ, ಹೈಕೋರ್ಟ್ನಲ್ಲೂ ಅಂಜುಮಾನ್ ಸಲ್ಲಿಸಿದ್ದ ಮೊದಲ ಮೇಲ್ಮನವಿ ವಜಾಗೊಂಡಿದೆ. ಅಂಜುಮಾನ್ ಇಸ್ಲಾಂ ಬಳಿ ಭೂಮಿ ಎಂದಿಗೂ ಸ್ವಾಧೀನ ಇರಲಿಲ್ಲ ಹೀಗಾಗಿ ಭೂಮಿಯನ್ನು ನಮಗೆ ಬೇಕಾದಂತೆ ಬಳಕೆ ಮಾಡಬಹುದು ಇದಕ್ಕೆ ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಗೆ ಎಲ್ಲಾ ರೀತಿಯ ಅಧಿಕಾರವಿದೆ ಎಂದು ಗಣೇಶೋತ್ಸವಕ್ಕೆ ಅವಕಾಶ ನೀಡುವ ಅಧಿಕಾರವನ್ನು ಪಾಲಿಕೆಗೆ ನೀಡುವಂತೆ ಮನವಿ ಮಾಡಿದರು.
ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಲು ಯಾರೂ ಅಡ್ಡಿಪಡಿಸಿಲ್ಲ, ಒಂದು ವೇಳೆ ಅಡ್ಡಿಪಡಿಸಿದ್ದರೆ ಅಂಜುಮಾನ್ ಇಸ್ಲಾಂ ಅರ್ಜಿ ಸಲ್ಲಿಸಬಹುದಿತ್ತು. ಹೀಗಾಗಿ ಅಂಜುಮಾನ್ ಇಸ್ಲಾಂ ಸಲ್ಲಿಸಿದ ಅರ್ಜಿ ಊರ್ಜಿತವಲ್ಲ, ಚಾಮರಾಜಪೇಟೆ ಮೈದಾನ ಕುರಿತು ಸುಪ್ರೀಂ ಕೋರ್ಟ್ ಆದೇಶಕ್ಕೂ ಹುಬ್ಬಳ್ಳಿ ಮೈದಾನಕ್ಕು ಸಂಬಂಧವಿಲ್ಲ. ಇದು ಒಬ್ಬರ ಸ್ವತ್ತಿನಂತೆ ಪ್ರಶ್ನೆ ಮಾಡಲು ಆಗಲ್ಲ, ಅಲ್ಲದೆ ಗಣೇಶೋತ್ಸವ ಎಲ್ಲರೂ ಸೇರಿ ಆಚರಿಸುವ ಹಬ್ಬ ಹಾಗಾಗಿ ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸಿ ತೀರ್ಪು ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ : ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಸ್ವೀಕಾರ ಮಾಡುತ್ತೇವೆ: ಪ್ರಮೋದ್ ಮುತಾಲಿಕ್
ಅರ್ಜಿದಾರರ ಪರ ವಾದ: ನಂತರ ಅಂಜುಮಾನ್ ಇಸ್ಲಾಂ ಪರ ವಕೀಲರ ವಾದ ಮಂಡನೆ ಮಾಡಿದ ವಕೀಲರು, ಹುಬ್ಬಳ್ಳಿ ಮೈದಾನ ನಮ್ಮನೆಂದು ನಾವು ಹೇಳುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಗಣೇಶ ಉತ್ಸವಕ್ಕೆ ಅವಕಾಶ ನೀಡಬಾರದು. ಪಾಲಿಕೆಯೇ ಈದ್ಗಾ ಮೈದಾನದ ಮಾಲೀಕರಾದರೂ ಕೂಡ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ವಾದ ಪ್ರತಿ ವಾದ ಆಲಿಸಿದ ನ್ಯಾಯಮೂರ್ತಿಗಳು, ತೀರ್ಪು ನೀಡಲು ಸಮಯಾವಕಾಶ ಬೇಕು ಎಂದು ತಿಳಿಸಿ ರಾತ್ರಿ 10.45 ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದರು. ನಂತರ 11.15 ಕ್ಕೆ ತೀರ್ಪು ಪ್ರಕಟಿಸಿದರು.
ನಡು ರಾತ್ರಿಯೇ ಹಿಂದೂ ಸಂಘಟನೆಗಳ ಸಂಭ್ರಮಾಚರಣೆ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡುತ್ತಿದಂತೆ ಹಿಂದೂ ಪರ ಸಂಘಟನೆಗಳು ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದವು. ಸ್ಥಳಕ್ಕೆ ಪೊಲೀಸ್ ಆಯುಕ್ತ ಲಾಬೂರಾಮ್ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆಗಮಿಸಿ ಜನರನ್ನು ಮೈದಾನದ ಗೇಟ್ ನಿಂದ ಕಳುಹಿಸಿದರು. ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಈದ್ಗಾ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಕೋರ್ಟ್ ಆದೇಶ ಸ್ವಾಗತಾರ್ಹ : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಕುರಿತು ಹೈ ಕೋರ್ಟ್ ಒಳ್ಳೆಯ ನಿರ್ಧಾರ ಪ್ರಕಟ ಮಾಡಿದೆ. ಕೋರ್ಟ್ ಆದೇಶ ಸ್ವಾಗತಾರ್ಹ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಹೈಕೋರ್ಟ್ ಮಹತ್ವದ ತೀರ್ಪು ಹೊರಡಿಸಿದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನ ಸಾರ್ವಜನಿಕರ ಸ್ವತ್ತು. ಯಾವುದೇ ರೀತಿಯಾದ ಪೂಜಾ ಸ್ಥಳವಲ್ಲ. ಇಲ್ಲಿ ಅನೇಕ ರೀತಿಯ ಚಟುವಟಿಕೆಗಳು ನಡೆಯುತ್ತವೆ ಎಂದರು.
ಇದನ್ನೂ ಓದಿ : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ : ಪಾಲಿಕೆ ಕಮಿಷನರ್ಗೆ ಅಧಿಕಾರ ನೀಡಿದ ಹೈಕೋರ್ಟ್
ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಲು ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿದೆ. ಅದನ್ನು ಬಿಟ್ಟರೇ ಉಳಿದೆಲ್ಲ ಸಮಯದಲ್ಲಿ ಈದ್ಗಾ ಮೈದಾನ ಕಾರ್ಪೋರೇಷನ್ ಗೆ ಸೇರಿದ್ದು, ಹಾಗಾಗಿ ಇಲ್ಲಿ ಯಾವುದೇ ಸಮಸ್ಯೆ ಬರಬಾರದಿತ್ತು. ಆದರೆ ಕೆಲವರು ಅದರಲ್ಲೂ ವಿಶೇಷವಾಗಿ ಕೆಲವು ರಾಜಕೀಯ ಪಕ್ಷಗಳು ಇದನ್ನು ವಿರೋಧ ಮಾಡಿದ್ದವು ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಇನ್ನೂ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುತ್ತಿರುವ ಸಂಘಟಕರು ಹಾಕಿರುವ ಷರತ್ತುಗಳನ್ನು ಪಾಲಿಸಿ ಹಬ್ಬ ಆಚರಣೆ ಮಾಡಬೇಕು. ಯಾವುದೇ ರೀತಿಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ಗಣೇಶೋತ್ಸವ ಹೊರತುಪಡಿಸಿ ಇನ್ನುಳಿದ ಕಾರ್ಯಕ್ರಮ ನಡೆಯುವಾಗಲೂ ಯಾರು ವಿರೋಧ ಮಾಡಬಾರದು ಎಂದರು.
ಶಾಂತಿಯುತವಾಗಿ ಗಣೇಶೋತ್ಸವ ಆಚರಣೆ : ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾತನಾಡಿ, ತೀರ್ಪಿಗಾಗಿ ಹೈಕೋರ್ಟ್ನ ಏಕಸದಸ್ಯ ಪೀಠಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅಂಜುಮಾನ್ ಇಸ್ಲಾಂ ಸಂವಿಧಾನ ವಿರೋಧಿಯಾಗಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಶಾಂತಿಯುತ ಮತ್ತು ಅದ್ದೂರಿಯಾಗಿ ಆಚರಿಸುತ್ತೇವೆ ಎಂದರು.
ಇದನ್ನೂ ಓದಿ : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರ: ಹೈಕೋರ್ಟ್‌ನಲ್ಲಿ ನಡೆಯುತ್ತಿದೆ ಅರ್ಜಿ ವಿಚಾರಣೆ