ಬೆಂಗಳೂರು : ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳ ನೇಮಕ ವಿಚಾರದಲ್ಲಿ ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಹೈಕೋರ್ಟ್ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೂ ವಿಸ್ತರಿಸಿದೆ.
ಕೆಎಟಿ ಆದೇಶ ಪಾಲಿಸದ ಸರ್ಕಾರದ ಕ್ರಮ ಪ್ರಶ್ನಿಸಿ ತುಮಕೂರಿನ ಎಲ್.ಪ್ರೇಮ್ ಸಾಗರ್ ಹಾಗೂ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎ. ಎಸ್. ಪೊನ್ನಣ್ಣ, ಕಾನೂನು ಬದ್ಧವಾಗಿ ನಡೆಯುತ್ತಿದ್ದ ನೇಮಕ ಪ್ರಕ್ರಿಯೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿರುವುದು ಸಂವಿಧಾನ ಬಾಹಿರ. ಕೋರ್ಟ್ ಆದೇಶವಿದ್ದರೂ ಸಹ ಕೆಪಿಎಸ್ಸಿ ಎಂಜಿನಿಯರ್ಗಳ ನೇಮಕ ಪ್ರಕ್ರಿಯೆ ಮುಂದುವರಿಸಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಕರ್ನಾಟಕ ಲೋಕಸೇವಾ ಆಯೋಗದ ಪರ ವಕೀಲರು ಪ್ರತಿಕ್ರಿಯಿಸಿ, ನಮಗೆ ನೋಟಿಸ್ ತಡವಾಗಿ ತಲುಪಿದೆ. ಇನ್ನು ಮುಂದೆ ಪ್ರಕ್ರಿಯೆ ಮುಂದುವರೆಸುವುದಿಲ್ಲ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ಸೆಪ್ಟೆಂಬರ್ 2ರಂದೇ ಮಧ್ಯಂತರ ಆದೇಶ ಮಾಡಲಾಗಿದೆ. ಅದು ತಲುಪಿಲ್ಲ ಎಂದು ಪ್ರಕ್ರಿಯೆ ಮುಂದುವರಿಸಿದ್ರೆ ಏನರ್ಥ ಎಂದು ಕೆಪಿಎಸ್ಸಿ ವಿರುದ್ಧ ಬೇಸರ ವ್ಯಕ್ತಪಡಿಸಿತು. ಜತೆಗೆ, ಮಧ್ಯಂತರ ಆದೇಶ ವಿಸ್ತರಿಸಿ ವಿಚಾರಣೆಯನ್ನು ನವೆಂಬರ್ 6ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದ ಅವಧಿಯಲ್ಲಿ 570 ಎಇ ಗ್ರೇಡ್-1 ಹುದ್ದೆ ಹಾಗೂ 300 ಜೆಇ ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. 2019ರ ಮಾರ್ಚ್ 7ರ ಅಧಿಸೂಚನೆ ಪ್ರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಲಿಖಿತ ಪರೀಕ್ಷೆ ನಡೆಸಿ, 1:5ರ ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿತ್ತು. ಸಂದರ್ಶನ ನಡೆಸಿ, ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವಷ್ಟರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.
ನಂತರ, ಕೆಇಎ ನೇಮಕ ಪ್ರಕ್ರಿಯೆ ರದ್ದುಗೊಳಿಸಲು 2019ರ ಅ. 30 ರಂದು ಲೋಕೋಪಯೋಗಿ ಇಲಾಖೆಗೆ ಆದೇಶಿಸಿತ್ತು. ಸರ್ಕಾರದ ನಿರ್ಣಯವನ್ನು ಕೆಎಟಿ ರದ್ದುಗೊಳಿಸಿತ್ತು. ಆದರೆ, ಸರ್ಕಾರ ಕೆಎಟಿ ಆದೇಶ ಪಾಲನೆ ಮಾಡುವ ಬದಲಿಗೆ ಕೆಪಿಎಸ್ಸಿ ಮೂಲಕ ಹೊಸದಾಗಿ 990 ಎಂಜಿನಿಯರ್ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಇದನ್ನು ಅರ್ಜಿದಾರರು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.