ಬೆಂಗಳೂರು: ನೇಮಕಾತಿ ಸಂದರ್ಭದಲ್ಲಿ 15 ವರ್ಷ ಆರು ತಿಂಗಳಾಗಿದ್ದ ಅಪ್ರಾಪ್ತನಿಗೆ ಉದ್ಯೋಗ ನೀಡಿದ್ದನ್ನು ಹಿಂಪಡೆದಿರುವ ಸಾಹಿತ್ಯ ಅಕಾಡೆಮಿ ನಿರ್ಧಾರವನ್ನು ಹೈಕೋರ್ಟ್ನ ಕಲಬುರಗಿ ಪೀಠವು ಇತ್ತೀಚೆಗೆ ಎತ್ತಿ ಹಿಡಿದಿದೆ. ಅಲ್ಲದೆ, ನಿರ್ದಿಷ್ಟವಾಗಿ ವಯೋಮಾನಕ್ಕಿಂತ ಕೆಳಗಿದ್ದಲ್ಲಿ ಉದ್ಯೋಗ ನೀಡುವುದಕ್ಕೆ ಬಾಲ ಕಾರ್ಮಿಕ ತಿದ್ದುಪಡಿ ನಿಯಮ 2ಬಿ ಅಡಿ ಅವಕಾಶವಿಲ್ಲ. ಈ ಮೂಲಕ ನೇಮಕಾತಿ ಆದೇಶ ಹಿಂಪಡೆಯುವ ಮೂಲಕ ಪ್ರತಿವಾದಿಗಳು ಅದನ್ನು ಸಮರ್ಥಿಸಿದ್ದಾರೆ ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.
ಬೀದರ್ನ ವಿವೇಕ್ ಹೆಬ್ಬಾಳೆ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ನೇಮಕಾತಿಯ ಸಂದರ್ಭದಲ್ಲಿ ಅರ್ಜಿದಾರರ ವಯಸ್ಸು ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ನಿಯಮಗಳು 2017ರ ನಿಯಮ 2ಬಿಗೆ ವಿರುದ್ಧವಾಗಿದೆ. ಹಾಲಿ ಪ್ರಕರಣಕ್ಕೆ ಬಾಲ ಕಾರ್ಮಿಕ ತಿದ್ದುಪಡಿ ನಿಯಮಗಳು ಅನ್ವಯಿಸುತ್ತವೆ. ಹೀಗಾಗಿ, ಸಾಹಿತ್ಯ ಅಕಾಡೆಮಿ ನೇಮಕಾತಿ ಹಿಂಪಡೆದಿರುವ ಕ್ರಮ ಸರಿಯಾಗಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ತನ್ನನ್ನು ಸೇಲ್ಸ್ ಕಮ್ ಎಕ್ಸಿಬಿಷನ್ ಅಸಿಸ್ಟೆಂಟ್ ಆಗಿ ನೇಮಕ ಮಾಡಿದ್ದ ಆದೇಶವನ್ನು ಹಿಂಪಡೆದಿರುವ ಸಾಹಿತ್ಯ ಅಕಾಡೆಮಿಯ ಎರಡು ಆದೇಶಗಳನ್ನು ವಜಾ ಮಾಡುವಂತೆ ಅರ್ಜಿದಾರರು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಸೇಲ್ಸ್ ಕಮ್ ಎಕ್ಸಿಬಿಷನ್ ಅಸಿಸ್ಟೆಂಟ್ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಅಕಾಡೆಮಿಯು ಅರ್ಜಿ ಆಹ್ವಾನಿಸಿತ್ತು. ನೇಮಕಾತಿ ಆದೇಶದಲ್ಲಿನ ಸಂಬಂಧಿತ ದಾಖಲೆ ಪ್ರಸ್ತುತಪಡಿಸಿದ್ದಕ್ಕೆ ಒಳಪಟ್ಟು ಅರ್ಜಿದಾರರನ್ನು ಆಯ್ಕೆ ಮಾಡಲಾಗಿತ್ತು. ಆದರೆ, 2022ರ ಜನವರಿ 24ರಂದು ಪತ್ರ ಬರೆದಿದ್ದ ಸಾಹಿತ್ಯ ಅಕಾಡೆಮಿಯು ಅರ್ಜಿದಾರರಿಗೆ 15 ವರ್ಷ 6 ತಿಂಗಳು ಆಗಿರುವುದರಿಂದ ನೇಮಕಾತಿ ಆದೇಶ ಹಿಂಪಡೆಯಲಾಗಿದೆ ಎಂದು ತಿಳಿಸಿತ್ತು.
ವಿಚಾರಣೆ ವೇಳೆ, ಹುದ್ದೆಗೆ ಸೂಕ್ತವಾದ ಅನುಭವವನ್ನು ಅರ್ಜಿದಾರರು ಹೊಂದಿದ್ದು, ಅನುಭವ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದರೆ, ಅರ್ಜಿದಾರರ ತಾಯಿ ಬುಕ್ ಹೌಸ್ ಹೊಂದಿದ್ದು, ಅವರು ನೀಡಿರುವುದು ನಕಲಿ ಅನುಭವ ಸರ್ಟಿಫಿಕೆಟ್. ಇಡೀ ಪ್ರಕರಣ ಅರ್ಜಿದಾರರ ವಯಸ್ಸಿನ ಸುತ್ತ ನಡೆಯುತ್ತಿದ್ದು, ನೇಮಕಾತಿ ಸಂದರ್ಭದಲ್ಲಿ ಅರ್ಜಿದಾರರಿಗೆ 15 ವರ್ಷ 6 ತಿಂಗಳಾಗಿತ್ತು ಎಂದು ಸಾಹಿತ್ಯ ಅಕಾಡೆಮಿಯ ಪರ ವಕೀಲರು ವಾದ ಮಂಡಿಸಿದ್ದರು.
ಇದನ್ನೂ ಓದಿ: ಪೋಕ್ಸೋ ಪ್ರಕರಣ: ಸಂತ್ರಸ್ತೆಗೆ ಮಾಹಿತಿ ನೀಡದೇ ಆರೋಪಿಗೆ ಮಂಜೂರು ಮಾಡಿದ್ದ ಜಾಮೀನು ರದ್ದು