ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ನಡೆಸುತ್ತಿದ್ದ 487 ಹುದ್ದೆಗಳ ನೇಮಕ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆ ನಡೆಯುವವರೆಗೆ ನೇಮಕಾತಿ ಪಟ್ಟಿ ಪ್ರಕಟಿಸದಂತೆ ನ್ಯಾಯಾಲಯವು ಸೂಚನೆ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಐತಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿ ಐದು ಸಂಘಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ನಡೆಯಿತು.
ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯಕ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಅಲ್ಲದೇ, ರಾಜ್ಯ ಸರ್ಕಾರ, ಕೆಎಂಎಫ್, ಗುಜರಾತ್ ಮೂಲದ ನೇಮಕಾತಿ ಏಜೆನ್ಸ್ ಇನ್‌ಸ್ಟಿಟ್ಯೂಟ್ ಫಾರ್ ರೂರಲ್ ಮ್ಯಾನೇಜ್‌ಮೆಂಟ್ ಮತ್ತು ಸಿಐಡಿಗೆ ನೋಟಿಸ್ ಜಾರಿ ಮಾಡಿದೆ. ನೇಮಕದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಅಭ್ಯರ್ಥಿಗಳ ಅಂಕಗಳನ್ನು ತಿದ್ದಲು ಪ್ರತಿ ಹುದ್ದೆಗೆ 30ರಿಂದ 50 ಲಕ್ಷ ರೂಪಾಯಿವರೆಗೆ ಲಂಚ ಪಡೆಯಲಾಗಿದೆ ಎಂದು ಆರೋಪಿಸಲಾಗಿತ್ತು.
ವಿಚಾರಣೆ ವೇಳೆ, ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಡಿ.ಆರ್. ರವಿಶಂಕರ್, ನೇಮಕದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ಲಿಖಿತ ಪರೀಕ್ಷೆಯಲ್ಲಿ ಕನ್ನಡವೂ ಒಂದು ವಿಷಯವಾಗಿದೆ. ಆದರೆ, ನೇಮಕ ಪರೀಕ್ಷೆಗಳನ್ನು ನಡೆಸಲು ಯಾವುದೇ ಅನುಭವ ಇಲ್ಲದ, ಕನ್ನಡದ ಬಗ್ಗೆ ಜ್ಞಾನವಿಲ್ಲದ ಗುಜರಾತ್ನ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ಗೆ ಅವಕಾಶ ನೀಡಲಾಗಿದೆ. ಅದಕ್ಕೂ ಮುಖ್ಯವಾಗಿ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಸಂದರ್ಶಕರಿಗೆ ನೀಡಿದ್ದಾರೆ. ಇದು ನಿಯಮ ಬಾಹಿರವಾಗಿದೆ. ಹಾಗಾಗಿ ತಡೆ ನೀಡಬೇಕು ಎಂದು ಕೋರಿದರು.
ಅಲ್ಲದೇ, ಅಂಕಗಳನ್ನು ತಿದ್ದಲಾಗಿದೆ. ಅದಕ್ಕಾಗಿ ಹಲವು ಅಭ್ಯರ್ಥಿಗಳಿಗೆ ಹಣಕ್ಕೆ ಬೇಡಿಕೆ ಒಡ್ಡಲಾಗಿದೆ. ಪ್ರತಿ ಅಭ್ಯರ್ಥಿಗೆ ಸುಮಾರು 30 ಲಕ್ಷದಿಂದ 50 ಲಕ್ಷ ರೂ.ಗಳವರೆಗೆ ಲಂಚ ಪಡೆಯಲಾಗಿದೆ. ನೇಮಕಾತಿಗಳು ಭಾರಿ ಅಕ್ರಮ ನಡೆದಿದೆ ಎಂದು ಆರೋಪಗಳ ಬಗ್ಗೆ ಕೆಎಂಎಫ್ಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಜೊತೆಗೆ ಮುಖ್ಯಮಂತ್ರಿಗಳಿಗೂ ನೇಮಕ ತಡೆ ಹಿಡಿಯುವಂತೆ ಕೋರಲಾಗಿದೆ, ಆದರೂ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠಕ್ಕೆ ಹಿರಿಯ ವಕೀಲ ಡಿ.ಆರ್. ರವಿಶಂಕರ್ ವಿವರಿಸಿದರು.
ಈ ಅಕ್ರಮ ನೇಮಕದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಐಡಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಜೊತೆಗೆ ತನಿಖೆ ಮುಗಿಯುವವರೆಗೆ ನೇಮಕ ತಡೆ ಹಿಡಿಯುವಂತೆ ಕೋರಿದ್ದ ಮನವಿಯನ್ನು ಪುರಸ್ಕರಿಸುವಂತೆಯೂ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಅಲ್ಲದೇ, ಈ 487 ಹುದ್ದೆಗಳ ನೇಮಕದಿಂದ ಪ್ರತಿ ತಿಂಗಳು ವೇತನಕ್ಕೆ 3 ಕೋಟಿ ಮತ್ತು ವರ್ಷಕ್ಕೆ 30ರಿಂದ 40 ಕೋಟಿ ಹೆಚ್ಚುವರಿ ವೆಚ್ಚ ತಗುಲಲಿದೆ. ಈ ಹೆಚ್ಚುವರಿ ಹುದ್ದೆಗಳ ಭರ್ತಿ ಅಗತ್ಯವಿಲ್ಲ. ಆದರೂ ನೇಮಕ ಮಾಡಲಾಗುತ್ತಿದೆ. ಇದರಿಂದ ಹಾಲು ಉತ್ಪಾದಕರ ಸಂಘಗಳ ಮೇಲೆ ಅಕ ಆರ್ಥಿಕ ಹೊರೆ ಬೀಳಲಿದೆ. ಈ ನೇಮಕದ ಮುಂದೆ ಸಹಕಾರ ಸಂಘಗಳ ಜತೆ ಕೆಎಂಎಫ್ ಚರ್ಚೆ ನಡೆಸಿಲ್ಲ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು ? : 487 ಹುದ್ದೆಗಳ ನೇಮಕಕ್ಕೆ ಕೆಎಂಎಫ್ 2022ರ ಅ. 20ರಂದು ಅಧಿಸೂಚನೆ ಹೊರಡಿಸಿತ್ತು. ಅದರ ಪ್ರಕ್ರಿಯೆ ನಡೆಸಲು ಗುಜರಾತ್ ಮೂಲದ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಏಜೆನ್ಸಿಯನ್ನು ನೇಮಕ ಮಾಡಿಕೊಂಡಿತ್ತು. ಪರೀಕ್ಷೆ ನಂತರ, 2023ರ ಫೆ. 2ರಿಂದ 28ವರೆಗೆ ಸಂದರ್ಶನ ನಡೆಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿತ್ತು.
ಇದನ್ನೂ ಓದಿ: ಟ್ವಿಟರ್ ಖಾತೆಗಳಿಗೆ ನಿರ್ಬಂಧ: ನಿರ್ಧಾರ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ