ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆ ರಾಜ್ಯದ ನ್ಯಾಯಾಲಯಗಳು ತೆರವು ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಮಧ್ಯಂತರ ಆದೇಶಗಳನ್ನು ವಿಸ್ತರಿಸಿಕೊಂಡು ಬಂದಿದ್ದ ಹೈಕೋರ್ಟ್, ಈ ವಿಸ್ತರಣೆಯನ್ನು ಫೆಬ್ರವರಿ 8ಕ್ಕೆ ಕೊನೆಗೊಳಿಸಿ ಆದೇಶಿಸಿದೆ.
ಓದಿ: ರಾಮ ಮಂದಿರ ನಿಧಿ ಸಂಗ್ರಹ ವಾಹನದ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ಆರೋಪ
ಕೊರೊನಾದಿಂದಾಗಿ ಸಾರ್ವಜನಿಕರು ನ್ಯಾಯಾಲಯಗಳ ಮೊರೆ ಹೋಗಲು ಸಾಧ್ಯವಾಗದ ಹಿನ್ನೆಲೆ ರಾಜ್ಯದ ನ್ಯಾಯಾಲಯಗಳು ತೆರವು ಕಾರ್ಯಾಚರಣೆಗಳಿಗೆ (eviction, demolition) ಸಂಬಂಧಿಸಿದಂತೆ ಹೊರಡಿಸಿರುವ ಮಧ್ಯಂತರ ಆದೇಶಗಳನ್ನು ಹೈಕೋರ್ಟ್ 2020ರ ಏಪ್ರಿಲ್ 16ರಂದು ಒಂದು ತಿಂಗಳ ಅವಧಿಗೆ ವಿಸ್ತರಿಸಿತ್ತು. ಬಳಿಕ ಕೊರೊನಾ ಸೋಂಕು ಕಡಿಮೆಯಾಗದ ಕಾರಣದಿಂದಾಗಿ ಈ ಆದೇಶವನ್ನು ವಿಸ್ತರಿಸಿಕೊಂಡು ಬಂದಿತ್ತು.
ಈ ಮೂಲಕ ಹೈಕೋರ್ಟ್ ಪೀಠಗಳು, ಜಿಲ್ಲಾ ನ್ಯಾಯಾಲಯಗಳು, ಸಿವಿಲ್ ಕೋರ್ಟ್ಗಳು, ಕೌಟುಂಬಿಕ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಾಲಯಗಳು, ಕೈಗಾರಿಕಾ ನ್ಯಾಯಾಧಿಕರಣಗಳು ನೀಡಿದ್ದ ತೆರವು ಆದೇಶಗಳ ಅನ್ವಯ ಕಾರ್ಯಾಚರಣೆ ನಡೆಸುವಂತಿರಲಿಲ್ಲ.
ಇಂದು ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಮಧ್ಯಂತರ ಆದೇಶಗಳನ್ನು ವಿಸ್ತರಿಸಿ ಹೊರಡಿಸಿದ್ದ ಆದೇಶ ಫೆಬ್ರವರಿ 8ಕ್ಕೆ ಕೊನೆಗೊಳ್ಳಲಿದೆ ಎಂದು ಆದೇಶಿಸಿದೆ.
ಇದೇ ವೇಳೆ ಕಾಲಮಿತಿ ಕಾಯ್ದೆ 1963ರ ಸೆಕ್ಷನ್ 4 ಪ್ರಕಾರ ಪ್ರಕರಣಗಳನ್ನು ದಾಖಲಿಸಲು, ಮೇಲ್ಮನವಿ ಅಥವಾ ಅರ್ಜಿಗಳನ್ನು ಸಲ್ಲಿಸಲು ವಿಸ್ತರಿಸಿಕೊಂಡು ಬರಲಾಗಿದ್ದ ಕಾಲಮಿತಿ ವಿಸ್ತರಣೆಯನ್ನೂ ಫೆಬ್ರವರಿ 8ಕ್ಕೆ ಕೊನೆಗೊಳಿಸಲಾಗಿದೆ.