ಬೆಂಗಳೂರು : ಇಎಸ್‍ಐ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪೂರ್ಣಗೊಳಿಸಿದ ನಂತರ ಇಎಸ್‍ಐ ಆಸ್ಪತ್ರೆಗಳಲ್ಲಿ ಐದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂಬ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ತನ್ನ ಆಸ್ಪತ್ರೆಗಳಲ್ಲಿ ಪದವಿ ಪಡೆದವರು ಕಡ್ಡಾಯವಾಗಿ ಐದು ವರ್ಷ ಸೇವೆ ಸಲ್ಲಿಸುವಂತೆ ಸೂಚಿಸಿ ಇಎಸ್‍ಐ ಹೊರಡಿಸಿದ್ದ ಆದೇಶವನ್ನು ರದ್ದಪಡಿಸುವಂತೆ ಕೋರಿ ಹುಬ್ಬಳ್ಳಿಯ ಡಾ. ಶಾಂತಕುಮಾರ್ ಹಾಗೂ ಇತರ 18 ಮಂದಿ ವೈದ್ಯ ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಹಾಗೆಯೇ ಅರ್ಜಿದಾರರಿಗೆ ಇಎಸ್‍ಐ ಆಸ್ಪತ್ರೆಯಲ್ಲಿ ಐದು ವರ್ಷ ಕಡ್ಡಾಯ ಸೇವೆ ಸಲ್ಲಿಸಲು ಸೂಚಿಸಿ ಇಎಸ್‍ಐ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. ಇಎಸ್ಐ ನಿಯಮ ಕಾನೂನಿಗೆ ವ್ಯತಿರಿಕ್ತವಾಗಿದೆ. ಕಡ್ಡಾಯ ಸೇವಾ ಜವಾಬ್ದಾರಿಯಿಂದ ಅರ್ಜಿದಾರರನ್ನು ಕೂಡಲೇ ಬೇಷರತ್ ಆಗಿ ಬಿಡುಗಡೆ ಮಾಡಬೇಕು. ಸರ್ವೀಸ್ ಬಾಂಡ್‍ಗೆ ಸಂಬಂಧಿಸಿದಂತೆ ಇನ್ನು ಮುಂದೆ ಅರ್ಜಿದಾರರು ಮತ್ತವರ ಪೋಷಕರ ಮೇಲೆ ಯಾವುದೇ ಬಾಧ್ಯತೆ ಇರುವುದಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಇದೇ ಮಾದರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಫೆ.14ರಂದು ಇದೇ ನ್ಯಾಯಪೀಠ ತೀರ್ಪು ನೀಡಿತ್ತು. ಈಗಿನ ಅರ್ಜಿದಾರರು ಸಹ ಈ ಹಿಂದಿನ ತೀರ್ಪಿನ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.