ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಶುರುವಾದ ಬಳಿಕ ಇದೇ ಮೊದಲ ಬಾರಿಗೆ ನ್ಯಾಯಾಲಯಗಳ ಆವರಣದೊಳಗೆ ಕಕ್ಷಿದಾರರು ಪ್ರವೇಶಿಸಲು ಹೈಕೋರ್ಟ್ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಅನುಮತಿ ನೀಡಲಾಗಿದೆ. ನ್ಯಾಯಾಲಯದ ಕಲಾಪ, ಕೋರ್ಟ್ ಆವರಣದೊಳಗೆ ಪ್ರವೇಶ, ಅರ್ಜಿಗಳ ದಾಖಲಾತಿ, ವಿಚಾರಣೆ ನಿಗದಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಹೈಕೋರ್ಟ್ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸೆ.1ರಿಂದ ಪರಿಷ್ಕೃತ ಮಾರ್ಗಸೂಚಿಗಳು ಜಾರಿಗೆ ಬರಲಿವೆ.
ಮಾರ್ಗಸೂಚಿಗಳು ಹೈಕೋರ್ಟ್ನ ಬೆಂಗಳೂರು, ಕಲಬುರಗಿ ಮತ್ತು ಧಾರವಾಡ ಪೀಠಗಳಿಗೆ ಅನ್ವಯಿಸುತ್ತವೆ. ನೂತನ ಮಾರ್ಗಸೂಚಿಯಲ್ಲಿ ಕಕ್ಷಿದಾರರು ಕೋರ್ಟ್ ಆವರಣದೊಳಗೆ ಪ್ರವೇಶಿಸಲು ಅನುಮತಿ ಕಲ್ಪಿಸಲಾಗಿದೆ.
ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವುದು ಆರಂಭವಾದ ಹಿನ್ನೆಲೆಯಲ್ಲಿ 2020ರ ಮಾರ್ಚ್ 24ರಂದು ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದ ಬಳಿಕ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ಕೋರ್ಟ್‌ಗಳು ಭೌತಿಕ ಕಲಾಪಗಳನ್ನು ಸ್ಥಗಿತಗೊಳಿಸಿ, ಆನ್‌ಲೈನ್ ಕಲಾಪ ಆರಂಭಿಸಿದ್ದವು.
ಈ ಸಂದರ್ಭದಲ್ಲಿ ವಕೀಲರು, ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಕಕ್ಷಿದಾರರಿಗೆ ಕೋರ್ಟ್ ಆವರಣದೊಳಗೆ ಪ್ರವೇಶ ಕಲ್ಪಿಸಿರಲಿಲ್ಲ.
ಹೊಸ ಮಾರ್ಗಸೂಚಿ ಪ್ರಮುಖಾಂಶಗಳು :
* ಆನ್‌ಲೈನ್ ಮತ್ತು ಭೌತಿಕ ಕಲಾಪಗಳೆರಡೂ ಮುಂದುವರೆಯಲಿವೆ. ವಕೀಲರು ಆನ್ಲೈನ್ಗೆ ಆದ್ಯತೆ ನೀಡಬೇಕು.
* ಕೋರ್ಟ್ ಆವರಣದೊಳಗೆ ಬರುವ ವಕೀಲರು, ಪಾರ್ಟಿ-ಇನ್-ಪರ್ಸನ್, ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರು ಕಡ್ಡಾಯವಾಗಿ ಒಂದು ಎನ್-95 ಮಾಸ್ಕ್ ಸೇರಿ ಎರಡು ಮಾಸ್ಕ್ ಧರಿಸಬೇಕು.
* ಹೈಕೋರ್ಟ್ ಸಿಬ್ಬಂದಿ ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಬಳಸಬೇಕು, ಸಾಮಾಜಿಕ ಅಂತರ ಕಡ್ಡಾಯ.
* ಕೋರ್ಟ್ಗೆ ಬರುವ ಪ್ರತಿಯೊಬ್ಬರು ಥರ್ಮಲ್ ಸ್ಯಾನಿಂಗ್ಗೆ ಒಳಗಾಗಬೇಕು. ಅನಾರೋಗ್ಯವಿದ್ದರೆ, ಕೋವಿಡ್ ಲಕ್ಷಣಗಳಿದ್ದರೆ ಪ್ರವೇಶ ನಿಷಿದ್ಧ.
* ತುರ್ತು ಸಂದರ್ಭದಲ್ಲಿ ಅರ್ಜಿ ದಾಖಲಿಸುವಾಗ ‘ಸಾಫ್ಟ್ ಕಾಪಿ’ಯನ್ನು ಇ-ಮೇಲ್ ಮೂಲಕ ಸಲ್ಲಿಸಬಹುದು.
* ಪ್ರಾಥಮಿಕ ವಿಚಾರಣೆ, ಅಡ್ಮಿಷನ್, ಆದೇಶ ಮತ್ತು ಅಂತಿಮ ವಿಚಾರಣೆಗೆ ಕೋರಿ ಸಲ್ಲಿಸುವ ಮೊಮೊಗಳನ್ನು ಇ-ಮೇಲ್ ಮೂಲಕವೇ ಕಳುಹಿಸಬೇಕು.
* ಕೋರ್ಟ್ ಶುಲ್ಕಗಳನ್ನು ಹೈಕೋರ್ಟ್ ವೆಬ್‌ಸೈಟ್ ಲಿಂಕ್ ಬಳಸಿ ಆನ್‌ಲೈನ್ ಮೂಲಕವೇ ಪಾವತಿಸಬೇಕು.
* ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ನೀಡಿರುವವರು ಫಲಿತಾಂಶ ಬರುವವರೆಗೂ ಐಸೊಲೇಷನ್ ಮತ್ತು ಹೋಂ ಕ್ವಾರಂಟೈನ್ನಲ್ಲಿರಬೇಕು.