ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆಯಾದ ಹಿನ್ನೆಲೆ ಹೈಕೋರ್ಟ್ ಕಲಾಪಕ್ಕೆ ಸಂಬಂಧಿಸಿದಂತೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಸಲಾಗಿದೆ. ಹೊಸ ಎಸ್ಒಪಿ ಮಾರ್ಗಸೂಚಿಗಳು ಇದೇ ಫೆ.7ರಿಂದ ಜಾರಿಯಾಗಲಿವೆ.
ಹೊಸ ಎಸ್ಒಪಿ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅವರು ಅಧಿಸೂಚನೆ ಹೊರಡಿಸಿದ್ದಾರೆ. ನಿಯಮಗಳು ಫೆ. 7ರಿಂದ ಮುಂದಿನ ಆದೇಶದವರೆಗ ಜಾರಿಯಲ್ಲಿರಲಿವೆ ಎಂದು ತಿಳಿಸಿದ್ದಾರೆ.
ಹೊಸ ಎಸ್ಒಪಿಯ ಪ್ರಮುಖ ಅಂಶಗಳು :
* ಹೈಕೋರ್ಟ್ನ ಎಲ್ಲ ಪೀಠಗಳು ಆನ್ಲೈನ್ ಮತ್ತು ಭೌತಿಕ ಕಲಾಪಗಳನ್ನು ನಡೆಸಲಿವೆ.
* ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ನಿಗದಿಯಾದ ಪ್ರಕರಣಗಳ ವಕೀಲರು ಹಾಗೂ ಪಾರ್ಟಿ-ಇನ್-ಪರ್ಸನ್ಗಳು ನ್ಯಾಯಾಲಯ ಪ್ರವೇಶಿಸಬಹುದು. ಈ ವೇಳೆ ಕೋವಿಡ್ ನಿಯಮಗಳ ಪಾಲನೆ ಕಡ್ಡಾಯ.
* ಪಾರ್ಟಿ ಇನ್ ಪರ್ಸನ್ಗಳು ನ್ಯಾಯಾಲಯ ಆವರಣ ಪ್ರವೇಶಿಸುವ ವೇಳೆ ಪಟ್ಟಿಯಲ್ಲಿ ತಮ್ಮ ಪ್ರಕರಣ ವಿಚಾರಣೆಗೆ ನಿಗದಿಯಾಗಿರುವುದನ್ನು ಪ್ರವೇಶ ದ್ವಾರದಲ್ಲಿ ಸ್ಪಷ್ಟಪಡಿಸಬೇಕು.
* ಕಕ್ಷೀದಾರರು ನ್ಯಾಯಾಲಯದ ನಿರ್ದೇಶನವಿದ್ದಲ್ಲಿ ಅಥವಾ ಅನುಮತಿ ಇದ್ದಲ್ಲಿ ಆ ಕುರಿತ ದಾಖಲೆ ತೋರಿಸುವುದು ಕಡ್ಡಾಯ
* ಕೋರ್ಟ್ ಆವರಣ ಪ್ರವೇಶಿಸುವ ಪ್ರತಿಯೊಬ್ಬರು ಎನ್-95 ಮಾಸ್ಕ್ ಸೇರಿದಂತೆ ಎರಡು ಮಾಸ್ಕ್ ಧರಿಸಿರಬೇಕು. ಸಿಬ್ಬಂದಿ ಎಲ್ಲ ಸಮಯದಲ್ಲೂ ಗ್ಲೌಸ್ ಧರಿಸುವುದು ಕಡ್ಡಾಯ.
* ಪ್ರಕರಣಗಳನ್ನು ಇ-ಫೈಲಿಂಗ್ ಜತೆಗೆ ಭೌತಿಕವಾಗಿಯೂ ದಾಖಲಿಸಬಹುದು.
* ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಹಾಗೂ ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಫೈಲಿಂಗ್ ಮಾಡಲು ಅವಕಾಶ. ತುರ್ತು ಅರ್ಜಿ ಸಲ್ಲಿಕೆಗೆ 2 ಕೌಂಟರ್‌ಗಳು ಸಂಜೆ 4.30ರವರೆಗೆ ತೆರೆದಿರಲಿವೆ.
* ಪ್ರಕರಣದ ತುರ್ತು ವಿಚಾರಣೆಯಿದ್ದಲ್ಲಿ ನಿಗದಿತ ಕೌಂಟರ್ನಲ್ಲಿ ಮೆಮೋ ಸಲ್ಲಿಸಬೇಕು. ಈ ಮೆಮೋವನ್ನು ಐಎ ಎಂದು ಪರಿಗಣಿಸಿ ಅದನ್ನು ಸಲ್ಲಿಸಿದ 3ನೇ ದಿನ ಪೀಠದ ಎದುರು ಇರಿಸಲಾಗತ್ತದೆ. ಇದರ ಹೊರತಾಗಿಯೂ ತುರ್ತು ಪ್ರಕರಣಗಳಿದ್ದಲ್ಲಿ ಮೆಮೋವನ್ನು ತುರ್ತಿನ ಕುರಿತು ವಿವರಿಸುವುದರ ಜತೆಗೆ ನಿಗದಿತ ಪೀಠದಲ್ಲಿಯೇ ಸಲ್ಲಿಸಬಹುದಾಗಿದೆ.
* ಸಿಆರ್ಪಿಸಿ ಸೆಕ್ಷನ್ 438, 439 ಹಾಗೂ 482 ಅಡಿ ಸಲ್ಲಿಸುವ ಕ್ರಿಮಿನಲ್ ಅರ್ಜಿಗಳು, ಸಂವಿಧಾನದ ವಿಧಿ 226 ರೆಡ್ ವಿತ್ 482 ಅಡಿ ಸಲ್ಲಿಸುವ ರಿಟ್ ಅರ್ಜಿಗಳು, ಕ್ರಿಮಿನಲ್ ಅಪೀಲ್ ಮತ್ತು ಕ್ರಿಮಿನಲ್ ರಿವಿಷನ್ ಪಿಟಿಷನ್ಗಳು, ಅವುಗಳನ್ನು ಸಲ್ಲಿಸಿದ 4ನೇ ದಿನ ಪೀಠದ ಎದುರು ಬರಲಿವೆ. ಇನ್ನು ಎಲ್ಲ ರಿಟ್ ಅರ್ಜಿಗಳು ಹಾಗೂ ಸಿವಿಲ್ ಪ್ರಕರಣಗಳು ಅವುಗಳನ್ನು ದಾಖಲಿಸಿದ 5ನೇ ದಿನ ಪೀಠದ ಎದುರು ನಿಗದಿಪಡಿಸಲಾಗುತ್ತದೆ
* ಕೋರ್ಟ್ ಶುಲ್ಕವನ್ನು ಹೈಕೋರ್ಟ್ ವೆಬ್ಸೈಟ್ ಮೂಲಕ ಆನ್ಲೈನ್ ಮೂಲಕವೂ, ನೇರವಾಗಿ ಕೌಂಟರ್ನಲ್ಲಿಯೂ ಪಾವತಿಸಬಹುದಾಗಿದೆ.
* ನೋಟರಿ ಹಾಗೂ ಓತ್ ಕಮಿಷನರ್ಸ್ ಪಾರ್ಕಿಂಗ್ ಜಾಗದಲ್ಲಿ ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ.
* ಕಚೇರಿ ಆಕ್ಷೇಪಣೆಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10.30ರಿಂದ ಸಂಜೆ 4.30 ಹಾಗೂ ಶನಿವಾರದಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಸರಿಪಡಿಸಲು ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ವಕೀಲರು ಅಥವಾ ಪಾರ್ಟಿ-ಇನ್-ಪರ್ಸನ್ಗಳು 15ರಿಂದ 30 ನಿಮಿಷಗಳಲ್ಲಿ ಫೈಲ್ ಹಿಂದಿರುಗಿಸಲು ಸೂಚಿಸಲಾಗಿದೆ.
* ವಕೀಲರ ಸಂಘ ಹಾಗೂ ಕ್ಯಾಂಟೀನ್ಗೆ ಅನುಮತಿ ನೀಡಲಾಗಿದೆ. ಇನ್ನು ಕೋರ್ಟ್ ಹಾಲ್ಗಳಲ್ಲಿ ಲಭ್ಯವಿರುವ ಕುರ್ಚಿಗಳಲ್ಲಿ ಶೇ.50ರಷ್ಟು ಬಳಕೆಗೆ ಮಾತ್ರ ಅವಕಾಶ ಕೊಡಲಾಗಿದೆ.
* ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಮೊದಲಿನಂತೆ ಕಾರ್ಯನಿರ್ವಹಿಸಬಹುದಾಗಿದೆ. ಆದರೆ, ಕಕ್ಷೀದಾರರು ಅನಗತ್ಯ ಕೋರ್ಟ್ಗೆ ಬರದಂತೆ ವಕೀಲರು ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ 'ವೈಫ್ ಗಿವಿಂಗ್' ದಂಧೆಗೆ ಟ್ವಿಟರ್ ಮೂಲಕ ಆಹ್ವಾನ; ಪತ್ನಿಯ LIVE ವಿಡಿಯೋ ಮಾಡಿ ಶೇರ್ ಮಾಡ್ತಿದ್ದ ಪತಿ!