ಬೆಂಗಳೂರು : ನಿರ್ದಿಷ್ಟ ಸಮುದಾಯ ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡುವ ರಾಜಕೀಯ ನಾಯಕರು ಮತ್ತು ಇಂತಹ ಭಾಷಣಗಳನ್ನು ವರದಿ ಮಾಡುವ ಸುದ್ದಿ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಿತ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ದ್ವೇಷ ಭಾಷಣಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಾಂದೋಲನ ಸಂಸ್ಥೆಯ ಎ.ಆರ್. ವಾಸವಿ ಮತ್ತು ಸ್ವಾತಿ ಶೇಷಾದ್ರಿ ಎಂಬುವರು ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಾಖ್ಯಾನ ಇಲ್ಲ. ಈ ಕುರಿತು ಶಾಸನ ರೂಪಿಸುವ ಕುರಿತು ಸಂಸತ್ತು ಕೂಡ ಯೋಚಿಸಿಲ್ಲ. ಹೀಗಾಗಿ ಅರ್ಜಿದಾರರು ಕೋರಿರುವಂತೆ ಆರ್ಟಿಕಲ್ 226 ರ ಅಡಿ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ವಜಾಗೊಳಿಸಿದೆ.
ಅರ್ಜಿಯಲ್ಲಿ, ಕಾನೂನು ಉಲ್ಲಂಘಿಸಿ ರಾಜಕಾರಣಿಗಳು ನಿರ್ದಿಷ್ಠ ಸಮುದಾಯದ ವಿರುದ್ದ ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ. ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ರೆಗ್ಯುಲೇಷನ್) ಆಕ್ಟ್ 1995 ರ ನಿಯಮಗಳನ್ನು ಉಲ್ಲಂಘಿಸಿ ಟೆಲಿವಿಷನ್ ಮಾಧ್ಯಮಗಳು ದ್ವೇಷ ಪೂರಿತ ಭಾಷಣಗಳನ್ನು ಯಥಾವತ್ತಾಗಿ ಪ್ರಸಾರ ಮಾಡುತ್ತಿವೆ. ಆದ್ದರಿಂದ, ರಾಜಕಾರಣಿಗಳು ಮತ್ತು ಸುದ್ದಿ ಮಾಧ್ಯಮಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.
ಅರ್ಜಿಯಲ್ಲಿ ರಾಜ್ಯ ಗೃಹ ಇಲಾಖೆ, ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ, ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸೇರಿದಂತೆ 11 ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ರಾಜ್ಯ ಸರ್ಕಾರದ ಪರ ಸಹಾಯಕ ಅಡ್ವೊಕೇಟ್ ಜನರಲ್ ಆರ್ ಸುಬ್ರಹ್ಮಣ್ಯ ಹಾಗೂ ಟಿ.ಎಲ್. ಕಿರಣ್ ಕುಮಾರ್ ಅವರು ವಾದ ಮಂಡಿಸಿದ್ದರು.