ಬೆಂಗಳೂರು: ಬೆಂಗಳೂರು ಕೃಷಿ ವಿವಿಯ ವಿವಿಧ ಕೋರ್ಸ್‍ಗಳಿಗೆ ಆ.21ದಿಂದ ಆರಂಭಗೊಳ್ಳಲಿರುವ ಆನ್‍ಲೈನ್ ಪರೀಕ್ಷೆಗಳಿಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಇಂಟರ್ ನೆಟ್ ಕೊರತೆ ಕಾರಣದಿಂದ ಯಾವುದೇ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ವಿವಿಗೆ ಸೂಚಿಸಿದೆ.
ಈ ಕುರಿತು ಕೃಷಿ ವಿವಿಯ ಬಿಎಸ್ಸಿ (ಕೃಷಿ) ವಿದ್ಯಾರ್ಥಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ವಿವಿ ಆನ್‍ಲೈನ್ ಪರೀಕ್ಷೆ ನಡೆಸುತ್ತಿದೆ. ಆದರೆ ಸಾಕಷ್ಟು ವಿದ್ಯಾಥಿಗಳು ಗುಡ್ಡಗಾಡು ಪ್ರದೇಶ, ಹಳ್ಳಿಗಳಿಂದ ಬಂದವರಾಗಿದ್ದಾರೆ. ಇವರಲ್ಲಿ ಹಲವರ ಬಳಿ ಲ್ಯಾಪ್‍ಟಾಪ್, ಸ್ಮಾರ್ಟ್ ಫೋನ್ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ಇಂಟರ್ ನೆಟ್ ಸಂಪರ್ಕ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಆನ್‍ಲೈನ್ ಪರೀಕ್ಷೆ ನಡೆಸಿದರೆ ಶೇ.40ರಷ್ಟು ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಲಿದ್ದಾರೆ. ಆದ್ದರಿಂದ ಪರೀಕ್ಷೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನ್ಯಾಯಾಲಯ ಕೊನೆ ಕ್ಷಣದಲ್ಲಿ ಪರೀಕ್ಷೆಗಳಿಗೆ ತಡೆ ನೀಡಿದರೆ, ಪರೀಕ್ಷೆಗೆ ಸಿದ್ಧವಾಗಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ತಡೆ ನೀಡಲು ಸಾಧ್ಯವಿಲ್ಲ. ಆದರೆ ಇಂಟರ್ ನೆಟ್ ಕೊರತೆ ಕಾರಣಕ್ಕೆ ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತರಾಗದಂತೆ ವಿವಿ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಆಗಸ್ಟ್ .28ಕ್ಕೆ ಮುಂದೂಡಿತು.