ಬೆಂಗಳೂರು : ಶಶಿಕಲಾ ಜೊಲ್ಲೆಯವರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಜೀರೋ ಟ್ರಾಫಿಕ್ ಕಲ್ಪಿಸಿದ್ದ ಪ್ರಕರಣದ ಮರು ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ.
ಜಿರೋ ಟ್ರಾಫಿಕ್ ನೀಡಿದ್ದ ಪೊಲೀಸರ ಕ್ರಮ ಪ್ರಶ್ನಿಸಿ ನಗರದ ಜಿ.ಬಾಲಾಜಿ ನಾಯ್ಡು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಮರು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನಾಯ್ಡು ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಜೀರೋ ಟ್ರಾಫಿಕ್ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು ಹಾಗೂ ಕ್ರಮ ಜರುಗಿಸಲು ಕೋರಿ ಸರ್ಕಾರಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಗೃಹ ಇಲಾಖೆ ಪರಿಗಣಿಸಿಲ್ಲ.
ಅರ್ಜಿ ಕುರಿತಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿಷಯನ್ನೂ ತಮ್ಮ ಗಮನಕ್ಕೆ ತಂದಿಲ್ಲ. ಈ ನಡುವೆ ನ್ಯಾಯಾಲಯ ಸರ್ಕಾರದ ಹೇಳಿಕೆ ಪರಿಗಣಿಸಿ ಅರ್ಜಿ ಇತ್ಯರ್ಥಪಡಿಸಿದೆ ಎಂದು ತಿಳಿಸಿದರು. ಅಲ್ಲದೇ ಪ್ರಕರಣದಲ್ಲಿ ಮೊದಲಿಗೆ ಅರ್ಜಿದಾರರು ಪಾರ್ಟಿ-ಇನ್-ಪರ್ಸನ್ ಆಗಿದ್ದರು.
ಆ ಬಳಿಕ ನಾನು ವಕಾಲತ್ತು ಹಾಕಿದ್ದರೂ ಅದನ್ನು ಕಾಸ್ ಲಿಸ್ಟ್ನಲ್ಲಿ ಅಪ್ಡೇಟ್ ಮಾಡಿಲ್ಲ. ಮುಖ್ಯವಾಗಿ ಸರ್ಕಾರ ಕ್ರಮ ಕೈಗೊಂಡ ಕುರಿತು ನಮಗೆ ಮಾಹಿತಿ ನೀಡಿಲ್ಲ. ಆದ್ದರಿಂದ ಅರ್ಜಿಯನ್ನು ಮರು ವಿಚಾರಣೆ ನಡೆಸಬೇಕು ಎಂದು ಕೋರಿದರು.
ವಾದ ಆಲಿಸಿದ ಪೀಠ, ಅರ್ಜಿಯನ್ನು ಈಗಾಗಲೇ ಇತ್ಯರ್ಥ ಪಡಿಸಲಾಗಿದೆ. ಅರ್ಜಿದಾರರು ನೀಡಿದ ದೂರಿನ ಮೇರೆಗೆ ಸರ್ಕಾರ ಕೈಗೊಂಡ ಕ್ರಮದ ವರದಿಯನ್ನು ನಿಮಗೆ ನೀಡಲಾಗುವುದು. ಆದೇಶದ ಕುರಿತು ಆಕ್ಷೇಪವಿದ್ದಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣದ ಹಿನ್ನೆಲೆ : 2021ರ ಆಗಸ್ಟ್ 4ರಂದು ನಡೆದ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಶಿಕಲಾ ಜೊಲ್ಲೆ ಅವರಿಗೆಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ಜೀರೋ ಟ್ರಾಫಿಕ್ ಕಲ್ಪಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಬಾಲಾಜಿ ನಾಯ್ಡು, ಪೊಲೀಸರು ತಮ್ಮ ಆಡಳಿತಾತ್ಮಕ ಅಧಿಕಾರ ದುರ್ಬಳಕೆ ಮಾಡಿಕೊಂಡು ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಜೀರೋ ಟ್ರಾಫಿಕ್ ಕಲ್ಪಿಸಿರುವ ಕ್ರಮ ಸಂವಿಧಾನದ ವಿಧಿ 15ರ ಉಲ್ಲಂಘನೆ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠ, ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿ. ಸರ್ಕಾರ ಅರ್ಜಿ ಪರಿಗಣಿಸಿ ಒಂದು ತಿಂಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿತ್ತು. ಆ ಬಳಿಕ ನಡೆದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಸರ್ಕಾರ, 2021ರ ನವೆಂಬರ್.24ರಂದು ಅರ್ಜಿದಾರರ ಮನವಿ ಇತ್ಯರ್ಥಪಡಿಸಿದೆ ಎಂದು ತಿಳಿಸಿತ್ತು.
ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿಲ್ಲ. ನ್ಯಾಯಾಲಯವೂ ಸರ್ಕಾರದ ಹೇಳಿಕೆ ಪರಿಗಣಿಸಿ ಅರ್ಜಿ ಇತ್ಯರ್ಥಪಡಿಸಿದೆ. ಅರ್ಜಿದಾರರ ಬದಲು ವಕೀಲರು ವಾದ ಮಂಡಿಸಲು ಸಲ್ಲಿಸಿದ್ದ ವಕಾಲತ್ತನ್ನೂ ಸೂಕ್ತವಾಗಿ ಪರಿಗಣಿಸಿಲ್ಲ. ಇದೀಗ ವಕೀಲರು ಪ್ರಕರಣದಲ್ಲಿ ವಾದ ಮಂಡಿಸಲಿದ್ದು, ಅರ್ಜಿಯನ್ನು ಮರುವಿಚಾರಣೆಗೆ ಪರಿಗಣಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಭಾರಿ ಇಳಿಮುಖ.. ಇಂದು 49 ಸೋಂಕಿತರು ಸಾವು