ಬೆಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ 400 ಕೋಟಿ ರೂಪಾಯಿ ಬೃಹತ್ ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ದಾಖಲಿಸಲಾಗಿರುವ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಎಂಬೆಸ್ಸಿ ಗ್ರೂಪ್ನ ಅಧ್ಯಕ್ಷರೂ ಆಗಿರುವ ಜಿತೇಂದ್ರ ವೀರ್ವಾನಿ ಮತ್ತು ಇತರರು ತಮ್ಮ ಮೇಲಿನ ಪ್ರಕರಣ ರದ್ದುಪಡಿಸಬೇಕೆಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಚೆಕ್ ಬೌನ್ಸ್ ಪ್ರಕರಣದಲ್ಲಿ ಇವರ ವಿರುದ್ದ ಬೆಂಗಳೂರಿನ 21ನೇ ಎಸಿಎಂಎಂ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ದುಬೈ ಮೂಲದ 80 ವರ್ಷದ ಹಿರಿಯ ನಾಗರೀಕರಾದ ಪರ್ಧನಾನಿ ಚತುರ್ಭುಜ ಬಸ್ಸಾರ್ ಮಲ್ ಎಂಬುವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ವ್ಯವಹಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ತಿಳಿಸಿ ವೀರ್ವಾನಿ ಮತ್ತು ಇತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿದಾರರು, 400 ಕೋಟಿ ರೂಪಾಯಿ ಮೊತ್ತದ ಚೆಕ್ನ್ನು ಭದ್ರತೆಗಾಗಿ ಮಾತ್ರ ನೀಡಲಾಗಿದೆ ಎನ್ನುವ ವಾದವನ್ನು ಈ ಹಂತದಲ್ಲಿ ಒಪ್ಪಲು ಸಾಧ್ಯವಿಲ್ಲ. ಅರ್ಜಿದಾರರು ತಮ್ಮನ್ನು ಸಮರ್ಥಿಸಿಕೊಳ್ಳುವುದರ ಹಿಂದೆ ಹಲವಾರು ವಿವಾದಾಸ್ಪದ ಅಂಶಗಳ ಪ್ರಶ್ನೆಗಳಿವೆ. ಅರ್ಜಿದಾರರು ತಪ್ಪೆಸಗದಿದ್ದರೆ, ಅಷ್ಟೊಂದು ವಿಶ್ವಾಸವಿದ್ದರೆ, ಅಧೀನ ನ್ಯಾಯಾಲಯದಲ್ಲಿನ ವಿಚಾರಣೆ ಎದುರಿಸಿ ಪರಿಶುದ್ಧರಾಗಿ ಹೊರಬರಲಿ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಜಿತೇಂದ್ರ ವೀರ್ವಾನಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ಬ್ಲೂಟೂತ್, FSL ವರದಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್ ಆದೇಶ