ಬೆಂಗಳೂರು : ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಎನ್.ಕೆ. ಲೋಕನಾಥ್ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರೊ. ಶರತ್ ಅನಂತಮೂರ್ತಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪ್ರತಿವಾದಿ ಹಾಗೂ ಕುಲಪತಿ ಪರ ವಕೀಲರು, ಕಳೆದ ಮೂರು ತಿಂಗಳಿಂದ ಅವರು ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಜು. 21ರಂದು ಕುಲಪತಿ ನೇಮಕಕ್ಕೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ಆದರೆ ನ್ಯಾಯಪೀಠ, ತಡೆ ತೆರವುಗೊಳಿಸಲು ನಿರಾಕರಿಸಿ ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು.
ಈ ಹಿಂದೆ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಮೊದಲಿಗೆ ವಿಶ್ವವಿದ್ಯಾಲಯದ ಕಾಯಿದೆ ಅನ್ವಯ ನಿರ್ದಿಷ್ಟ ಅರ್ಹತೆ ಇಲ್ಲದಿದ್ದರೂ ನಿಯಮಾವಳಿ ಉಲ್ಲಂಘಿಸಿ ಕುಲಪತಿಯನ್ನು ನೇಮಕ ಮಾಡಲಾಗಿದೆ. ಲೋಕನಾಥ್ ಅವರ ಹೆಸರು ಉನ್ನತ ಶಿಕ್ಷಣ ಇಲಾಖೆ ಮಾಡಿದ್ದ ಪಟ್ಟಿಯಲ್ಲೇ ಇರಲಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: High Court: ಅಕ್ರಮ ಆಸ್ತಿ ಸಕ್ರಮಗೊಳಿಸಲು ನೆರವು ಪ್ರಕರಣ: ಎಂ.ಆರ್.ಸೀತಾರಾಮ್ ವಿರುದ್ಧದ ಪ್ರಕರಣ ರದ್ದತಿ ಅರ್ಜಿ ವಜಾ
ಅಲ್ಲದೆ, ಕುಲಪತಿಯಾಗಿ ನೇಮಕ ಮಾಡಿರುವ ಲೋಕನಾಥ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ. ಆದರೆ ಅವರು ಆ ವಿಷಯ ಮುಚ್ಚಿಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿಗೆ ವಿರುದ್ಧವಾಗಿ ನಿಯಮಗಳನ್ನು ಗಾಳಿಗೆ ತೂರಿ ಅವರನ್ನು ನೇಮಕ ಮಾಡಲಾಗಿದೆ ಎಂದು ವಾದ ಮಂಡಿಸಿದ್ದರು. ದಾಖಲೆಗಳ ಪ್ರಕಾರ, ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಲು 20 ದಿನ ಸಮಯ ನೀಡಿ ನ. 8ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಅರ್ಜಿ ಸಲ್ಲಿಕೆಗೆ 2022 ರ ನ. 28 ಕೊನೆಯ ದಿನವಾಗಿತ್ತು. ಅದೇ ದಿನ ಅವರು ಹೈಕೋರ್ಟ್ನಲ್ಲಿ ತಮ್ಮ ಪ್ರಕರಣದ ವಿರುದ್ಧ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: High Court: ಅಕ್ರಮ ಆಸ್ತಿ ಸಕ್ರಮಗೊಳಿಸಲು ನೆರವು ಪ್ರಕರಣ: ಎಂ.ಆರ್.ಸೀತಾರಾಮ್ ವಿರುದ್ಧದ ಪ್ರಕರಣ ರದ್ದತಿ ಅರ್ಜಿ ವಜಾ
2007ರಲ್ಲಿ ನಡೆದ ಪ್ರೊಪೆಸರ್ ನೇಮಕದಲ್ಲಿ ಅಕ್ರಮ ನಡೆದಿದೆ ಎನ್ನುವ ಕುರಿತಂತೆ ತನಿಖೆಗೆ ನೇಮಕ ಮಾಡಲಾಗಿದ್ದ ನ್ಯಾ. ರಂಗವಿಠಲಾಚಾರ್ ಆಯೋಗ ಪ್ರೊಫೆಸರ್ ನೇಮಕಕ್ಕೆ ಯುಜಿಸಿ ನಿಯಮದಂತೆ 10 ವರ್ಷಗಳ ಬೋಧನಾ ಅನುಭವವಿಲ್ಲ. ಹಾಗಾಗಿ ಅವರು ಯುಜಿಸಿ ನಿಯಮದ ಪ್ರಕಾರ, ಪ್ರೊಫೆಸರ್ ಹುದ್ದೆಗೆ ಅರ್ಹರಲ್ಲವೆಂದು ಹೇಳಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮೈಸೂರಿನ ಜಯಲಕ್ಷ್ಮೀಪುರಂ ವಾಸಿ ಡಿ.ವಿ. ಶಶಿಧರ್ ಮತ್ತಿತರರು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಲೋಕನಾಥ್ ಮತ್ತಿತರರ ವಿರುದ್ಧ ಆಸ್ತಿ ಒತ್ತುವರಿ ಸಂಬಂಧ 2020 ರ ನ. 4ರಂದು ವಂಚನೆ ಪ್ರಕರಣ ದಾಖಲಿಸಿದ್ದರು. ಆ ಕುರಿತ ಪ್ರಕರಣ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: High Court: ವಿದ್ಯಾರ್ಥಿಗಳ ಮೇಲೆ ಕಠಿಣ ಶಿಸ್ತು ಕ್ರಮ ಪರಿಶೀಲಿಸಲು ಹೈಕೋರ್ಟ್ ಸೂಚನೆ