ಬೆಂಗಳೂರು: ನ್ಯಾಯಾಲಯದ ಆದೇಶದ ಮೇರೆಗೆ ರಾಜಕಾಲುವೆ ಒತ್ತುವರಿ ಸಮೀಕ್ಷೆ ನಡೆಸಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ನಗರದ ಅಪಾರ್ಟ್‌ಮೆಂಟ್ ನಿವಾಸಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಶಿಲ್ಪಿತ ಸ್ಲೆಂಡರ್ ಅನೆಕ್ಸ್ ಅಪಾರ್ಟ್‌ಮೆಂಟ್‌ನ 23 ಫ್ಲಾಟುದಾರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ, ಅರ್ಜಿದಾರರೆಲ್ಲ ಅಪಾರ್ಟ್‌ಮೆಂಟ್ ನಿವಾಸಿಗಳಾಗಿದ್ದು, ಬಿಬಿಎಂಪಿ ತೆರವು ಕಾರ್ಯಾಚರಣೆಗೆ ಅಡ್ಡಿ ಮಾಡಿರುವುದು ದೃಢವಾದ ಹಿನ್ನೆಲೆ ಅರ್ಜಿಯನ್ನು ವಜಾ ಮಾಡಿದೆ.
ಫ್ಲಾಟ್‌ಗಳ ಮಾಲೀಕರಾದವರು ಅಪಾರ್ಟ್‌ಮೆಂಟ್‌ನಲ್ಲಿರಬೇಕು. ಆದರೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ಉದ್ದೇಶದಿಂದ ಅರ್ಜಿದಾರರು ಒಟ್ಟಾಗಿ ಕೈ ಜೋಡಿಸಿದ್ದಾರೆ. ಇದು ಐಪಿಸಿ ಸೆಕ್ಷನ್ 149 ಅಕ್ರಮ ಕೂಟ ರಚನೆ ಮತ್ತು ಸೆಕ್ಷನ್ 143 ಸರ್ಕಾರಿ ಅಧಿಕಾರಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಅಡಿಯಲ್ಲಿ ಅಪರಾಧವಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ದೂರುದಾರರಾದ ಮಾಲತಿ ಬಿಬಿಎಂಪಿಯ ಕಾರ್ಯಕಾರಿ ಎಂಜಿನಿಯರ್ ಆಗಿದ್ದು. ಹೈಕೋರ್ಟ್ ಆದೇಶದ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರೊಂದಿಗೆ ರಾಜಕಾಲುವೆಯ ಒತ್ತುವರಿ ಸಮೀಕ್ಷೆ ನಡೆಸಿ ತಂತಿಬೇಲಿ ಅಳವಡಿಸಲು ಮುಂದಾದಾಗ ಅರ್ಜಿದಾರರು ತೆರವು ಕಾರ್ಯಾಚರಣಗೆ ಅಡ್ಡಿಪಡಿಸಿದ್ದಾರೆಂದು ಫೋಟೋ ಮತ್ತು ವಿಡಿಯೋ ದೃಶ್ಯಾವಳಿಗಳ ಮೂಲಕ ಸಾಬೀತಾಗಿದೆ.
ಪ್ರಕರಣದ ಹಿನ್ನೆಲೆ ಏನು?: ಬಿಬಿಎಂಪಿ ಎಂಜಿನಿಯರ್ ಮಾಲತಿ ಅವರು 2020ರ ಮಾ.21ರಂದು ನೀಡಿದ ದೂರು ಪ್ರಕಾರ ಮಹದೇವಪುರ ಗ್ರಾಮದ ಸರ್ವೇ ನಂ.151/1 ಮತ್ತು 151/4 ಮತ್ತು 119ರಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ ಜಾಗದವನ್ನು ತೆರವುಗೊಳಿಸುವಂತೆ 2020ರ ಜ.16ರಂದು ಹೈಕೋರ್ಟ್ ಆದೇಶಿಸಿತ್ತು. ಅದರ ಪ್ರಕಾರ ಮಹದೇವಪುರ ವಲಯದ ಬಿಬಿಎಂಪಿ ಕಾರ್ಯಕಾರಿ ಎಂಜಿನಿಯರ್ ಆದ ಮಾಲತಿ ಅವರು, 2020ರ ಮಾ.31ರಂದು ರಾಜಕಾಲುವೆ ಒತ್ತುವರಿ ಜಾಗವನ್ನು ಸರ್ವೇ ನಡೆಸಲು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ, ಅರ್ಜಿದಾರರು ಅಕ್ರಮವಾಗಿ ಒಟ್ಟುಗೂಡಿ ಪ್ರತಿಭಟನೆ ನಡೆಸಿದ್ದರು.
ಒತ್ತುವರಿ ತೆರವು ಕಾರ್ಯಚರಣೆ ಮತ್ತು ತಂತಿ ಬೇಲಿ ಅಡವಳಿಕೆಗೆ ಅಡ್ಡಿಪಡಿಸಿದ್ದರು. ಈ ಕುರಿತು ಮಾಲತಿ ಅವರು ಮಹದೇವಪುರ ಠಾಣೆಗೆ ದೂರು ಸಲ್ಲಿಸಿದ್ದರು. ಅದನ್ನು ಆಧರಿಸಿ ಪೊಲೀಸರು ತಮ ವಿರುದ್ಧ ದಾಖಲಿಸಿದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ತಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೆವು. ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆ ಮಾಡಲು ಅಡ್ಡಿಪಡಿಸಿಲ್ಲ. ತಮ್ಮ ವಿರುದ್ಧ ತನಿಖೆ ನಡೆಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ ಎಂದು ಆಕ್ಷೇಪಿಸಿದ್ದರು.
ಇದನ್ನೂ ಓದಿ: ಓಲಾ, ಉಬರ್ ಆಟೋ ಸೇವೆ ನಿರ್ಬಂಧ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್