ಬೆಂಗಳೂರು: ಪದವಿ ಹಂತದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿರುವ ಸರ್ಕಾರದ ನಿರ್ಣಯವನ್ನು ಮರು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗುವುದು ಎಂದು ಹೈಕೋರ್ಟ್ ಮೌಖಿಕವಾಗಿ ತಿಳಿಸಿದೆ.
ಪದವಿ ಹಂತದಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಕೆ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್ ಹಾಗೂ ಭಾಷೆ ಅಧ್ಯಯನದಲ್ಲಿ ಆಯ್ಕೆ ಸ್ವಾತಂತ್ರ್ಯ ಕೋರಿ ಕೆಲ ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಅವರಿದ್ಧ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಿದ್ಯಾರ್ಥಿಗಳ ಪರ ವಕೀಲರು, ಎನ್‌ಇಪಿ ನಿಯಮಗಳಲ್ಲಿ ಯಾವುದೇ ಭಾಷೆ ಕಲಿಕೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ಸಷ್ಟಪಡಿಸಿದೆ. ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯವಲ್ಲ ಎಂದು ಹೇಳಿರುವುದರಿಂದ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅರ್ಜಿದಾರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಭಾಷೆ ಅಧ್ಯಯನ ಮುಂದುವರಿಸಲು ಸ್ವತಂತ್ರರು ಎಂದು ಆದೇಶಿಸಬೇಕು ಎಂದು ಕೋರಿದರು. ಜೊತೆಗೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ. ನರಗುಂದ್ ವಾದಿಸಿ, ಅಡ್ವೊಕೇಟ್ ಜನರಲ್ ಅನುಪಸ್ಥಿತಿಯಲ್ಲಿ ಪ್ರಕರಣ ನಿರ್ಧರಿಸುವುದು ಸರಿಯಲ್ಲ ಎಂದರು.
ಹೇಳಿಕೆ ಪರಿಗಣಿಸಿದ ಪೀಠ, ಕನ್ನಡ ಕಡ್ಡಾಯ ಕಲಿಕೆ ವಿಚಾರವನ್ನು ಮರು ಪರಿಶೀಸಲು ನ್ಯಾಯಾಲಯ ಈ ಹಿಂದೆಯೇ ಸೂಚಿಸಿತ್ತು. ಅಡ್ವೊಕೇಟ್ ಜನರಲ್ ಅವರು ಈ ಕುರಿತಂತೆ ಸ್ಪಷ್ಟನೆ ನೀಡಲಿ. ನಂತರ, ಕನ್ನಡ ಕಲಿಕೆ ಕಡ್ಡಾಯದ ಕುರಿತ ನಿಲುವನ್ನು ಮರು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿತು.
ಇದನ್ನೂ ಓದಿ: ಆರ್ಥಿಕ ನಿರ್ಬಂಧ ಬಳಿಕ ಮತ್ತೊಂದು ಶಾಕ್; ರಷ್ಯಾದಿಂದ ತೈಲ, ಅನಿಲ ಆಮದಿಗೆ ಅಮೆರಿಕ ನಿಷೇಧ
ಕೇಂದ್ರದ ನಿಲುವು: ಕನ್ನಡ ಭಾಷೆ ಕಲಿಕೆ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ತಿಳಿಸುವಂತೆ ಹೈಕೋರ್ಟ್ ನಿರ್ದೇಶಿಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ, ಸಮಗ್ರ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಎನ್‌ಇಪಿ ಜಾರಿಗೊಳಿಸಲಾಗಿದೆ. ಎನ್‌ಇಪಿಯಲ್ಲಿ ಭಾರತದ ಭಾಷೆಗಳು, ಕಲೆ ಮತ್ತು ಸಂಸ್ಕೃತಿ ಪ್ರಚಾರ ತಲೆಬರಹ ಹೊಂದಿರುವ 22ನೇ ಅಧ್ಯಾಯವನ್ನು ಭಾರತೀಯ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳ ಪ್ರಚಾರಕ್ಕೆ ಮೀಸಲಿಡಲಾಗಿದೆ.
ಈ ಅಧ್ಯಾಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮಾತೃಭಾಷೆ/ಸ್ಥಳೀಯ ಭಾಷೆಯನ್ನು ಬೋಧನಾ ಭಾಷೆಯನ್ನಾಗಿ ಬಳಕೆ ಮಾಡಬಹುದಾಗಿದ್ದು, ದ್ವಿಭಾಷೆಗೆ ಅವಕಾಶ ನೀಡುತ್ತದೆ. ಎನ್‌ಇಪಿ ಮತ್ತದರ ನಿಯಮಗಳಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ. ಹೀಗಾಗಿ, ಎನ್‌ಇಪಿ ನಿಯಮಗಳನ್ನು ಪುನರ್ ವ್ಯಾಖ್ಯಾನಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.