ಬೆಂಗಳೂರು: ಸೈಬರ್ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡಿರುವ ಪ್ರಕರಣಗಳ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರಹಾಕುವ ಬದಲಾಗಿ ಸೈಬರ್ ಕ್ರೈಂ ಪೊಲೀಸರು ಅಂತಹ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಹೈಕೋರ್ಟ್ ಬೇಸರ ವ್ಯಕ್ತ ಪಡಿಸಿದೆ.
ಫೋನ್ ಪೇ ನಿರ್ದೇಶಕ ರಾಹುಲ್ ಚಾರಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಡಿಜಿಟಲ್ ಪಾವತಿ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರಿಗೆ ಮತ್ತೆ ಹಣ ಕೊಡಿಸಲು ಪೊಲೀಸರೇ ಕಾನೂನುಬಾಹಿರ ವಿಧಾನ ಪಾಲಿಸಲು ಮುಂದಾಗಿದ್ದಾರೆ ಎಂದು ಹೈಕೋರ್ಟ್ ತೀಕ್ಷಣವಾಗಿ ಪ್ರತಿಕ್ರಿಯಿಸಿದೆ.
ಅಲ್ಲದೆ, ಮಹಿಳೆಯೊಬ್ಬರು ಕಳೆದುಕೊಂಡಿದ್ದ ಹಣಕ್ಕೆ ಬದಲಾಗಿ ಯುಪಿಐ ಆಧಾರಿತ ಡಿಜಿಟಲ್ ಪಾವತಿ ಮಧ್ಯವರ್ತಿ ಮತ್ತು ಫೋನ್‌ಪೇ ಪ್ರೈ.ಲಿ ಕಂಪನಿಯ ನಿರ್ದೇಶಕ ರಾಹುಲ್ ಚಾರಿ ಅವರ ಖಾತೆಯಿಂದ ಹಣ ಕಡಿತ ಮಾಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪುನಃ ಯಾವ ಖಾತೆಯಿಂದ ಹಣ ಕಡಿತ ಮಾಡಲಾಗಿದೆಯೋ ಅದೇ ಖಾತೆಗೆ ಹಿಂದಿರುಗಿಸುವಂತೆ ಸೂಚನೆ ನೀಡಿದೆ.
ಜತೆಗೆ, ಮೂರನೇ ವ್ಯಕ್ತಿಯಿಂದ ದೂರುದಾರರಿಗೆ ಮೊತ್ತವನ್ನು ವರ್ಗಾಯಿಸುವ ಮೂಲಕ ವಂಚನೆಯನ್ನು ಪತ್ತೆ ಹಚ್ಚದೇ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಏಕಾಏಕಿ ತನಿಖೆ ಮೊಟಕುಗೊಳಿಸುವುದು ನ್ಯಾಯೋಚಿತ ಕ್ರಮವಲ್ಲ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಕರಣದಲ್ಲಿ ಫೋನ್ ಪೇ ಮತ್ತು ರಾಹುಲ್ ಚಾರಿ ಇಬ್ಬರೂ ಆರೋಪಿಗಳಲ್ಲ. ಹಾಗಾಗಿ ಸೈಬರ್ ಪೊಲೀಸರು ನಿಜವಾದ ಆರೋಪಿ ವಂಚಕನನ್ನು ಪತ್ತೆಹಚ್ಚಲು ತನಿಖೆಯನ್ನು ಮುಂದುವರಿಸಬೇಕೆಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಆರ್.ಕೆ. ಮಾಧುರಿ ಎಂಬುವರು 2021ರ ಏಪ್ರಿಲ್ನಲ್ಲಿ ಆನ್‌ಲೈನ್ ವಂಚನೆಯಲ್ಲಿ ಹಣ ಕಳೆದುಕೊಂಡು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಅಮಿತ್ ಮಿಶ್ರಾ ಎಂಬುವರಿಗೆ ಕೆಲ ವ್ಯವಹಾರ ನಡೆಸುವುದಕ್ಕಾಗಿ ಫೋನ್ ಪೇ ಮೂಲಕ 15 ವಹಿವಾಟುಗಳಲ್ಲಿ 69,143 ರೂ.ಗಳನ್ನು ಪಾವತಿಸಿದ್ದರು. ಬಳಿಕ ವಂಚನೆಗೊಳಲಾಗಿದ್ದೇನೆ ಎಂದು ತಿಳಿಸಿದ್ದ ಮಾಧುರಿ, ಬೆಂಗಳೂರು ಉತ್ತರ ಸೈಬರ್ ಕ್ರೈಮ್ ಪೊಲೀಸರುಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಹಣ ಸಂದಾಯವಾಗಿದ್ದ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಬ್ಯಾಂಕ್ ಖಾತೆಯನ್ನು ಪತ್ತೆ ಹಚ್ಚಿಸಿದ್ದರು. ಬಳಿಕ ವಹಿವಾಟು ನಡೆಸಿದ್ದ ಫೋನ್‌ಪೇ ಖಾತೆಯನ್ನು ಫ್ರೀಜ್ ಮಾಡಲು ಯೆಸ್ ಬ್ಯಾಂಕ್‌ಗೆ ಮನವಿ ಮಾಡಿದ್ದರು. ಯೆಸ್ ಬ್ಯಾಂಕ್ನ ವೈಯಕ್ತಿಕ ಖಾತೆ ವಿವರಗಳನ್ನು ಪರಿಶೀಲನೆಗೊಳಪಡಿಸಿದಾಗ ಚಾರಿ ಅವರಿಗೆ ಸೇರಿದ್ದಾಗಿತ್ತು.
ಆ ನಂತರ ಪೊಲೀಸರು ಮಹಿಳೆ ಕಡೆಯಿಂದ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿ 69,143 ರೂ.ಗಳ ಹಣವನ್ನು ರಾಹುಲ್ ಚಾರಿ ಖಾತೆಯಿಂದ ಕಡಿತಗೊಳಿಸಿ ಅರ್ಜಿದಾರರಿಗೆ ವರ್ಗಾವಣೆ ಮಾಡಿಸಲು ಆದೇಶ ಪಡೆದುಕೊಂಡಿದ್ದರು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ರಾಹುಲ್, ತಮಗೆ ನೋಟಿಸ್ ನೀಡದೆ ಏಕಾಏಕಿ ಹಣ ಕಡಿತಗೊಳಿಸಲಾಗಿದೆ ಎಂದು ದೂರಿದ್ದರು.
ಇದನ್ನೂ ಓದಿ: ಫ್ಲಾಟ್ ಕೊಡದ ಬಿಲ್ಡರ್ಗೆ 5 ಲಕ್ಷ ದಂಡ : ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಆದೇಶ