ಬೆಂಗಳೂರು: ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸದೆ ಚಿಕ್ಕಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಭೋಗ ನಂದೀಶ್ವರ ದೇವಸ್ಥಾನದ ಅರ್ಚಕರನ್ನು ಸೇವೆಯಿಂದ ವಜಾಗೊಳಿಸಿದ ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಸಂಬಂಧ ಅರ್ಚಕ ಟಿ.ಸಿ.ಆಶ್ವೀಜ (28) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿದ್ದು, ಧಾರ್ಮಿಕ ದತ್ತಿ ಇಲಾಖೆ ಆದೇಶವನ್ನು ರದ್ದು ಪಡಿಸಿ ಆದೇಶಿಸಿದೆ. ಅಲ್ಲದೆ, ಪ್ರಕರಣ ಸಂಬಂಧ ಅರ್ಜಿದಾರರಿಗೆ ಸೂಕ್ತ ಅವಕಾಶ ಕಲ್ಪಿಸಿ ಅವರ ವಾದ ಆಲಿಸಿ, ಎರಡು ವಾರಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಧಾರ್ಮಿಕ ದತ್ತಿ ಆಯುಕ್ತರಿಗೆ ನಿರ್ದೇಶಿಸಿರುವ ಹೈಕೋರ್ಟ್, ಅಲ್ಲಿವರೆಗೆ ಅರ್ಜಿದಾರರಿಗೆ ದೇವಾಲಯದಲ್ಲಿ ಅರ್ಚಕರಾಗಿ ಮುಂದುವರೆಯಲು ಅನುಮತಿ ನೀಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಭೋಗ ನಂದೀಶ್ವರ ದೇವಾಲಯದ ಅರ್ಚಕರಾಗಿ 2015ರಲ್ಲಿ ನೇಮಕಗೊಂಡಿದ್ದರು. ಕರ್ತವ್ಯ ನಿರ್ವಹಣೆಯಲ್ಲಿ ಅರ್ಚಕರು ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅನಾಮಧೇಯ ಪತ್ರ ಬಂದಿತ್ತು. ಪತ್ರದಲ್ಲಿ ಅರ್ಚಕರು ಎರಡು ಮದ್ಯದ ಬಾಟಲಿ ಹೊಂದಿರುವ ಫೋಟೋ ಲಗತ್ತಿಸಲಾಗಿತ್ತು. ಈ ಸಂಬಂಧ ವಿವರಣೆ ಕೇಳಿ ನೀಡಿದ್ದ ಶೋಕಾಸ್ ನೋಟಿಸ್‌ಗೆ ಅರ್ಜಿದಾರರು ಉತ್ತರಿಸಿದ್ದರು. ನಂತರ ಅವರನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು.
ಒಂದು ವರ್ಷವಾದರೂ ಯಾವುದೇ ವಿಚಾರಣೆ ನಡೆಸದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎರಡು ವಾರದಲ್ಲಿ ವಿಚಾರಣೆ ನಡೆಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿತ್ತು. ಅಲ್ಲದೇ ಆದೇಶ ಪಾಲಿಸದಿದ್ದರೆ ಅರ್ಚಕರನ್ನು ಸೇವೆಯಿಂದ ಅಮಾನತುಗೊಳಿಸಿದ ಆದೇಶ ರದ್ದಾಗಲಿದೆ ಹಾಗೂ ಅರ್ಜಿದಾರರಿಗೆ ಕರ್ತವ್ಯ ನಿರ್ವಹಿಸಲು ಅನುಮತಿಸಲಾಗುತ್ತದೆ ಎಂದು ನಿರ್ದೇಶಿಸಿತ್ತು.
ಆದರೂ ಈ ಆದೇಶ ಪಾಲಿಸಿ ಯಾವುದೇ ವಿಚಾರಣೆ ನಡೆಸದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಅರ್ಜಿದಾರರನ್ನು ಅರ್ಚಕ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಈ ಆದೇಶ ರದ್ದುಕೋರಿ ಅರ್ಚಕರು ಹೈಕೋರ್ಟ್‌ಗೆ ಮತ್ತೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸುವ ಮುನ್ನ ನ್ಯಾಯಾಲಯ ಹೊರಡಿಸಿದಂತೆ ಯಾವುದೇ ಸೂಕ್ತ ವಿಚಾರಣೆ ನಡೆಸಿಲ್ಲ. ಈ ನಡೆಯು 2022ರ ಆ.22ರಂದು ಹೈಕೋರ್ಟ್ ಹೊರಡಿಸಿದ ಆದೇಶಕ್ಕೆ ವಿರುದ್ಧವಾಗಿದೆ ಮತ್ತು ಸ್ವಾಭಾವಿಕ ನ್ಯಾಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ನ್ಯಾಯಾಧೀಶರು ಕಾರ್ಯ ಒತ್ತಡ ಅನುಭವಿಸುತ್ತಿದ್ಧಾರೆ: ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್