ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಿಎಂಸಿ ಸರ್ಕಾರಿ ಪ್ರೌಢಶಾಲೆಯ ಆವರಣದ ಗೋಡೆಯಲ್ಲಿ, ಹಿಜಾಬ್ ನಮ್ಮ ಘನತೆ ಎಂಬುದಾಗಿ ಕಪ್ಪು ಬಣ್ಣದಲ್ಲಿ ಬರೆದಿದ್ದ ಇಬ್ಬರು ಯುವಕರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ನಿಷೇಧ) ಕಾಯಿದೆ ಸೆಕ್ಷನ್ 3ರ ಅಡಿ ಪ್ರಕ್ರಿಯೆ ವಜಾ ಮಾಡುವಂತೆ ಕೋರಿ ವಿಜಯನಗರದ ಮುಜಾಮಿಲ್ ಮತ್ತು ಮೊಹಮ್ಮದ್ ಜಮೌಲ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಬೆಳಗಾವಿ ನಗರಗಳು ಮಾತ್ರ ಈ ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ನಿಷೇಧ) ಕಾಯಿದೆ ಅಡಿಯಲ್ಲಿ ಬರಲಿವೆ. ಆದರೆ, ಆರೋಪಿಗಳ ವಿರುದ್ಧ ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ನಿಷೇಧ) ಕಾಯಿದೆ ಸೆಕ್ಷನ್ 3ರ( ಅನಧಿಕೃತವಾಗಿ ವಿರೂಪಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 1 ಕಟ್ಟುನಿಟ್ಟಾಗಿ ಪಾಲಿಸದೆ ಸೆಕ್ಷನ್ 3 ಅಡಿಯಲ್ಲಿ ಕ್ರಮಕ್ಕೆ ಮುಂದಾಗುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಸೆಕ್ಷನ್ 1ರ ಪ್ರಕಾರ ನಿರ್ದಿಷ್ಟ ಸ್ಥಳ/ಸ್ಥಳೀಯ ಪ್ರದೇಶವನ್ನು ಕಾಯಿದೆಯ ವ್ಯಾಪ್ತಿಗೆ ಒಳಪಡಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವುದು ಕಡ್ಡಾಯ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ, ಮೊಹಮ್ಮದ್ ಅಜರುದ್ದೀನ್, ಕಾನೂನಿನ ಅನ್ವಯ ವಿಜಯನಗರ ಜಿಲ್ಲೆಯು ಕಾಯಿದೆಯಗೆ ಒಳಪಟ್ಟಿಲ್ಲ. ಆದ್ದರಿಂದ, ಕಾಯಿದೆಯ ಸೆಕ್ಷನ್ ಅನ್ವಯಿಸಲಾಗದು ಎಂದು ವಾದ ಮಂಡಿದಿದ್ದರು. ಅರ್ಜಿದಾರರ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ಹೊಸಪೇಟೆಯನ್ನು ಕಾಯಿದೆಯ ವ್ಯಾಪ್ತಿಗೆ ತರುವ ಸಂಬಂಧ ಯಾವುದೇ ಅಧಿಸೂಚನೆ ಹೊರಡಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಕರಣವೇನು?: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಮಾಡಿದ್ದ ಆದೇಶ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತ್ತು. ಇದಾದ ಮರುದಿನವೇ ಅಂದರೆ 2022ರ ಮಾರ್ಚ್ 16ರಂದು ಶಾಲೆ ಪ್ರವೇಶಿಸಿದಾಗ ಶಾಲೆಯ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಹಿಜಾಬ್ ನಮ್ಮ ಘನತೆ ಎಂದು ಬರೆದಿದ್ದರು. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಕೇಂದ್ರದ ಪರಿಶೀಲನೆಗೊಳಪಟ್ಟ ಬಳಿಕ ವಿದೇಶಿ ನೆರವು ಬಿಡುಗಡೆ : ಹೈಕೋರ್ಟ್