ಬೆಂಗಳೂರು: ಹೈಕೋರ್ಟ್ ಸಂಕೀರ್ಣದ ತಳಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳನ್ನು ಸ್ಥಳಾಂತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಸೂಚಿಸಿರುವ ಹೈಕೋರ್ಟ್, ರಾಜ್ಯ ವಕೀಲರ ಪರಿಷತ್ತಿಗೆ ನ್ಯಾಯಾಲಯದ ಆವರಣದಲ್ಲಿ ಜಾಗ ನೀಡುವ ಕುರಿತು ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ತಿಳಿಸಿದೆ.
ಈ ಸಂಬಂಧ ತುಮಕೂರಿನ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಜತೆಗೆ ಸಾಕಷ್ಟು ಕಾಲದಿಂದ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ)ಗೆ ಕಾರ್ಯನಿರ್ವಹಿಸಲು ಹೈಕೋರ್ಟ್ ಆವರಣದಲ್ಲೇ ಬದಲಿ ಕಚೇರಿ ನೀಡುವ ಕುರಿತು ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠದ ಸಂಕೀರ್ಣದಲ್ಲಿ ಕೋರ್ಟ್ ಹಾಲ್ಗಳು ಹಾಗೂ ನ್ಯಾಯಮೂರ್ತಿಗಳ ಕಚೇರಿಗಳನ್ನು ಹೊರತುಪಡಿಸಿ ಬೋರ್ಡ್ ಬ್ರ್ಯಾಂಚ್, ಸಿವಿಲ್, ಕ್ರಿಮಿನಲ್, ಡಿಕ್ರಿ, ಇಂಡೆಕ್ಸ್, ಫೈಲಿಂಗ್ ಕೌಂಟರ್, ಪೆಂಡಿಂಗ್ ಬ್ರ್ಯಾಂಚ್, ಕೋರ್ಟ್ ಫೀ ಬ್ರ್ಯಾಂಚ್ ಸೇರಿ ಹಲವು ಕಚೇರಿಗಳು ಹಾಗೂ ಶಾಖೆಗಳು ತಳಮಹಡಿಯಲ್ಲಿವೆ. ಸೂಕ್ತ ಗಾಳಿ, ಬೆಳಕು ಇಲ್ಲದ ಈ ಜಾಗದಲ್ಲಿ ಸಾಕಷ್ಟು ಅನಾನುಕೂಲತೆಗಳಿವೆ.
ವಿಶೇಷವಾಗಿ ಅಲ್ಲಿನ ಸಿಬ್ಬಂದಿ ಪ್ರತಿದಿನ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಆದ್ದರಿಂದ ತಳಮಹಡಿಯಲ್ಲಿರುವ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.