ಬೆಂಗಳೂರು: ಘನತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ನ್ಯಾಯಾಲಯಕ್ಕೆ ನೀಡಿರುವ ವರದಿಯಂತೆ ನಡೆದುಕೊಳ್ಳದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚಾಟಿ ಬೀಸಿರುವ ಹೈಕೋರ್ಟ್ ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಬೇರೆ ಮಾರ್ಗವಿಲ್ಲ ಎಂದಿದೆ.
ಬಿಬಿಎಂಪಿಯ ಅಸಮರ್ಪಕ ತ್ಯಾಜ್ಯ ವಿಲೇವಾರಿ ನಿರ್ವಹಣೆ ಪ್ರಶ್ನಿಸಿ ನಗರದ ಸಂಘಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ಪಾಲಿಕೆ ಪರ ವಕೀಲರು ಸಲ್ಲಿಸಿದ್ದ ಅಸಮರ್ಪಕ ವಿವರಗಳುಳ್ಳ ಪ್ರಮಾಣಪತ್ರ ಗಮನಿಸಿದ ಪೀಠ ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಘನತ್ಯಾಜ್ಯ ವಿಲೇವಾರಿ ನಿರ್ವಹಣೆಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಈ ವಿಚಾರದಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳದೇ ಅನ್ಯ ಮಾರ್ಗವಿಲ್ಲ. ಇಲ್ಲದಿದ್ದರೆ ವರ್ಷಗಳು ಗತಿಸಿದರೂ ಇದಕ್ಕೆ ಪರಿಹಾರ ಸಿಗುವುದಿಲ್ಲ. ನಗರದ ನಾಗರೀಕರ ಜೊತೆ ಪಾಲಿಕೆ ಚೆಲ್ಲಾಟ ಆಡುತ್ತಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಅನುಪಾಲನಾ ವರದಿ ಬಿಬಿಎಂಪಿ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದೆ. ಒಂದೋ ಪಾಲಿಕೆ ವಿಸರ್ಜಿಸಿ ಆಡಳಿತಾಧಿಕಾರಿ ನೇಮಿಸಬೇಕು, ಇಲ್ಲವೇ ನಗರದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು. ಈ ಬಗ್ಗೆ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕೆಂದು ಅಸಮಾಧಾನ ವ್ಯಕ್ತಪಡಿಸಿತು.
ಈ ವೇಳೆ ಸರ್ಕಾರಿ ವಕೀಲರು ಸಮಜಾಯಿಸಿ ನೀಡಿ, ಬಿಬಿಎಂಪಿ ಕಾರ್ಯದಲ್ಲಿ ಲೋಪ ಆಗಿರುವ ಕುರಿತಂತೆ ವಿಚಾರಿಸಲು ಹಾಗೂ ಕ್ರಮ ಕೈಗೊಳ್ಳಲು ಕಾಲಾವಕಾಶ ನೀಡಬೇಕೆಂದು ಪೀಠಕ್ಕೆ ಕೋರಿದರು. ಇದಕ್ಕೊಪ್ಪಿದ ಪೀಠ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿರುವುದರಿಂದ ಅಗತ್ಯ ಕ್ರಮ ಕೈಗೊಳ್ಳಲು ಎರಡು ವಾರ ಕಾಲಾವಕಾಶ ನೀಡುತ್ತೇವೆ. ಈ ಹಂತದಲ್ಲಿ ನ್ಯಾಯಾಲಯ ಯಾವುದೇ ಕಠಿಣ ನಿರ್ದೇಶನ ಕೊಡಲು ಬಯಸುವುದಿಲ್ಲ. ಆದರೆ, 2019ರ ಜ.1ರಿಂದ 2020ರ ಜ.31ರವರೆಗೆ ನಗರದಲ್ಲಿ ಪ್ರತಿದಿನ ಎಷ್ಟು ಘನತ್ಯಾಜ್ಯ ಉತ್ಪತ್ತಿಯಾಗಿದೆ. ಸಂಸ್ಕರಣಾ ಘಟಕಗಳಲ್ಲಿ ಅದರ ನಿರ್ವಹಣೆ ಹೇಗೆ ನಡೆದಿದೆ ಎಂಬುದರ ಬಗ್ಗೆ ವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿದ ಹೈಕೋರ್ಟ್, ವಿಚಾರಣೆಯನ್ನು ಫೆಬ್ರವರಿ 17 ಕ್ಕೆ ಮುಂದೂಡಿತು.