ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೃಷ್ಣ ರಾಜೇಂದ್ರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಳಿಗೆಗಳನ್ನು ನಿರ್ಮಿಸಿ ಅಗ್ನಿ ಅನಾಹುತ ತಡೆಗೆ ಸುರಕ್ಷತಾ ಕ್ರಮ ಕೈಗೊಳ್ಳದಿರುವ ಬಗ್ಗೆ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಬೆಂಗಳೂರು ಹೂ ವ್ಯಾಪಾರಿಗಳ ಸಂಘ ಹಾಗೂ ಉಪಕರಣ ವ್ಯಾಪಾರಿಗಳ ಕ್ಷೇಮಾಭಿವದ್ಧಿ ಸಂಘದ ಕಾರ್ಯದರ್ಶಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಿಚಾರಣೆ ವೇಳೆ ನ್ಯಾಯಾಲಯ ಅನಧಿಕೃತ ಅಂಗಡಿಗಳ ತೆರವು ಹಾಗೂ ಅಗ್ನಿ ಶಾಮಕ ವ್ಯವಸ್ಥೆ ವಿಚಾರಕ್ಕೆ ಬಿಬಿಎಂಪಿ ಕೈಗೊಂಡಿರುವ ಕ್ರಮದ ಕುರಿತು ಅಸಮಾಧಾನ ಹೊರಹಾಕಿ ಕೆ.ಆರ್.ಮಾರುಕಟ್ಟೆಯ ಪಾಲಿಕೆ ಕಟ್ಟಡದಲ್ಲಿ ಅಗ್ನಿ ಸುರಕ್ಷಾ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಈಗಾಗಲೇ ಆದೇಶ ಹೊರಡಿಸಿದೆ. ಆದರೂ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿ ಕೆಲಸ ಮಾಡಲು ಯಾಕೆ ಆಗಲ್ಲ. ಈ ಬಗ್ಗೆ ಪಾಲಿಕೆ ಆಯುಕ್ತರೇ ಮುಂದಿನ ವಿಚಾರಣೆ ವೇಳೆ ಖುದ್ದಾಗಿ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.