ಬೆಂಗಳೂರು: ವಾಹನ ಚಾಲನೆ ವೇಳೆ ರಸ್ತೆ ಗುಂಡಿಗಳ ಕಾರಣದಿಂದ ಅಪಘಾತಕ್ಕೀಡಾಗಿ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡುವ ನ್ಯಾಯಾಲಯದ ಆದೇಶ ಜಾರಿಗೊಳಿಸಬೇಕೆ, ಬೇಡವೇ ಎಂಬ ಬಗ್ಗೆ ಸಭೆ ನಡೆಸಿರುವ ಬಿಬಿಎಂಪಿ ಮೇಯರ್, ಉಪಮೇಯರ್ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿಗಳು ಗರಂ ಆಗಿದ್ದಾರೆ. ಈ ಕುರಿತು ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಕ್ತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವನಿಜಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಿಬಿಎಂಪಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಸ್ತೆಗುಂಡಿಗಳಿಂದ ಹಾನಿಗೆ ಒಳಗಾದವರಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ಬಿಬಿಎಂಪಿ ಮೇಯರ್, ಉಪಮೇಯರ್, ಪ್ರತಿಪಕ್ಷ ನಾಯಕರು ಹಾಗೂ ಆಯುಕ್ತರು ಸಭೆ ನಡೆಸಿರುವ ಕುರಿತು ಹಾಗೂ ಈ ಸಂಬಂಧ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ನಿರ್ಣಯ ಕೈಗೊಂಡಿರುವ ಕುರಿತು ವಿವರಿಸಿದರು.
ವಕೀಲರು ನೀಡಿದ ಈ ಮಾಹಿತಿಗೆ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ನ್ಯಾಯಾಲಯದ ಆದೇಶ ಪಾಲಿಸುವ ಬದಲು ಅದೇ ವಿಚಾರವಾಗಿ ಸಭೆ ನಡೆಸಿದ್ದೇಕೆ ಮತ್ತು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ನಿರ್ಣಯ ಕೈಗೊಂಡಿದ್ದೇಕೆ? ಎಂದು ಪ್ರಶ್ನಿಸಿದರು. ನ್ಯಾಯಾಲಯದ ಆದೇಶವನ್ನು ಕಡೆಗಣಿಸಿ ಸಭೆ ನಡೆಸಿದವರು ಯಾರು? ಅವರ ಹೆಸರು ಮತ್ತು ವಿಳಾಸ ಮತ್ತು ವಿವರವನ್ನು ಜ.30ರೊಳಗೆ ಪೀಠಕ್ಕೆ ಸಲ್ಲಿಸಿ. ಈ ಸಂಬಂಧ ನ್ಯಾಯಾಲಯವು ಪರಿಶೀಲಿಸಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವ ಕುರಿತು ಆಲೋಚಲಿಸಲಾಗುತ್ತದೆ ಎಂದು ಖಡಕ್ ಸಂದೇಶ ರವಾನಿಸಿದರು. ಇದೇ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚಿರುವ ಅಂಕಿ ಅಂಶಗಳ ಅಸಮರ್ಪಕ ವಿವರವುಳ್ಳ ಪ್ರಮಾಣಪತ್ರ ನೋಡಿ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಪೀಠ ನಿಮಗೆ ಕೋರ್ಟ್ ಆದೇಶ ಪಾಲಿಸುವ ಕುರಿತು ಆಸಕ್ತಿ ಇಲ್ಲವೇ ಎಂದು ಪ್ರಶ್ನಿಸಿತು.
ಕಳೆದ ವಿಚಾರಣೆ ವೇಳೆ ರಸ್ತೆ ಗುಂಡಿಗಳ ಪರಿಣಾಮ ಅಪಘಾತಕ್ಕೀಡಾಗಿ ಹಾನಿಗೊಳಗಾಗಿರುವ ವಾಹನ ಸವಾರರಿಗೆ ಹಾಗೂ ಇತರರಿಗೆ ಸೂಕ್ತ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಈ ವೇಳೆ ಪ್ರಮಾಣಪತ್ರ ಸಲ್ಲಿಸಿದ್ದ ಬಿಬಿಎಂಪಿ, ನಗರದ 108 ರಸ್ತೆಗಳಲ್ಲಿ 401.8 ಕಿ.ಮೀ ಉದ್ದವಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಕ್ರಮ ಕೈಗೊಂಡಿದ್ದೇವೆ ಎಂದು ಪ್ರಮಾಣಪತ್ರ ಸಲ್ಲಿಸಿತ್ತು. ಆದ್ರೆ ಎಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಈ ವಿಚಾರವಾಗಿಯೂ ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆ ಸಮರ್ಪಕ ವರದಿ ಸಲ್ಲಿಸುವಂತೆ ತಾಕೀತು ಮಾಡಿ, ವಿಚಾರಣೆಯನ್ನು ಜ.31ಕ್ಕೆ ಮುಂದೂಡಿದೆ.