ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ರದ್ದು ಪಡಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಪುನರ್ ಪರಿಶೀಲನೆ ಮಾಡಲು ಹೈಕೋರ್ಟ್ ಸೂಚಿಸಿದೆ.
ಟಿಪ್ಪು ಜಯಂತಿ ಆಚರಣೆಯನ್ನ ರದ್ದು ಪಡಿಸಿರುವುದನ್ನ ಪ್ರಶ್ನಿಸಿ ಬಿಲಾಲ್ ಅಲಿ ಶಾ, ಟಿಪ್ಪು ಸುಲ್ತಾನ್ ಪಾಪ್ಯುಲರ್ ಫ್ರಂಟ್ ಮತ್ತು ಇತರ ಸಂಘಟನೆಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದವು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಟಿಪ್ಪು ಸುಲ್ತಾನ್ ಜಯಂತಿ ರದ್ದು ಪಡಿಸಿದ್ದು, ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚನೆಗೆ ಮುನ್ನವೆ ಯಾರ ಅಭಿಪ್ರಾಯ ಪಡೆಯದೆ ಜಯಂತಿ ರದ್ದು ಪಡಿಸಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.
ರಾಜ್ಯಾದ್ಯಂತ ಒಟ್ಟು 28 ಜನ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದೆ. ಎಲ್ಲವನ್ನೂ ಬಿಟ್ಟು ಟಿಪ್ಪು ಜಯಂತಿ ಮಾತ್ರ ರದ್ದುಪಡಿಸಿರುವುದು ಖಂಡನೀಯ. ಸರ್ಕಾರ ಯಾವಾಗ ಬೇಕಾದರೂ ತನ್ನ ಕಾಯ್ದೆಗಳನ್ನು ಬದಲಿಸಿಕೊಳ್ಳಲಿ, ಆದ್ರೆ ಅದಕ್ಕೂ ಒಂದು ನೀತಿ ನಿಯಮವಿದೆ. ಈ ರೀತಿ ಏಕಾಏಕಿ ತೀರ್ಮಾನ ಮಾಡಿರುವುದು ಸರಿಯಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರು ಇಷ್ಟೊಂದು ಜಯಂತಿಗಳ ಆಚರಣೆಗೆ ಕಾರಣ ಏನು.? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು. ಇದಕ್ಕೆ ರಾಜ್ಯದಲ್ಲಿ ಸ್ನೇಹತಾ ಮನೋಭಾವ, ಒಗ್ಗೂಡುವಿಕೆ, ಒಬ್ಬರನೊಬ್ಬರು ಅರಿತು ಬಾಳಲು ಆಚರಿಸಲಾಗುತ್ತಿದೆ ಎಂದು ಅಡ್ವೊಕೇಟ್ ಜನರಲ್ ಉತ್ತರಿಸಿದರು.
ಟಿಪ್ಪು ಜಯಂತಿ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ 29 ಜಿಲ್ಲೆಗಳಲ್ಲಿ ಏನೂ ಸಮಸ್ಯೆಗಳಾಗಿಲ್ಲ, ಕೊಡಗಿನ ಒಂದು ಭಾಗದಲ್ಲಿ ತೀವ್ರ ಸಮಸ್ಯೆಯಾಯಿತು. ಗುಂಪು ಘರ್ಷಣೆ ನಡೆಯಿತು, ಓರ್ವನ ಹತ್ಯೆಯಾಯಿತು ಎಂದು ಸಿಜೆ ಅವರಿಗೆ ಅಡ್ವೊಕೇಟ್ ಜನರಲ್ ಉತ್ತರಿಸಿದರು.
ಕಾನೂನು ಸುವ್ಯವಸ್ಥೆ ಕಾರಣಗಳಿಂದ ಟಿಪ್ಪು ಜಯಂತಿ ರದ್ದುಪಡಿಸಲು ಸಾಧ್ಯವೇ ಎಂದು ಅಡ್ವೋಕೇಟ್ ಜನರಲ್ ಅವರನ್ನು ನ್ಯಾಯಾಲಯ ಪ್ರಶ್ನಿಸಿತು. ಸರ್ಕಾರದ ಈ ಕ್ರಮವನ್ನು ನಾವು ಒಪ್ಪುವುದಿಲ್ಲ, ಈ ಹಂತದಲ್ಲಿ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ, ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರ ಮರುಪರಿಶೀಲಿಸಬೇಕು. ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿ 2 ತಿಂಗಳುಗಳ ಕಾಲ ವಿಚಾರಣೆಯನ್ನು ಮುಂದೂಡಿದೆ.