ಬೆಂಗಳೂರು: ಕೋಲಾರ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿರುವ ಕ್ವಾರಿಗೆ ಹೊಸಕೋಟೆ ನಗರಸಭೆ ಅಧಿಕಾರಿಗಳು ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲು ಹೈಕೋರ್ಟ್ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ)ಗೆ ನಿರ್ದೇಶಿಸಿದೆ.
ಈ ಕುರಿತು ಕರ್ನಾಟಕ ರಾಜ್ಯ ರೈತ ಮತ್ತು ಹಸಿರು ಸೇನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ವಾದ ಮಂಡಿಸಿ, ಕೋಲಾರ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದ ಸರ್ವೇ ನಂ.44/2 ರಲ್ಲಿ ಕಾರ್ಯ ಸ್ಥಗಿತಗೊಳಿಸಿರುವ ಕ್ವಾರಿಗೆ ಹೊಸಕೋಟೆ ನಗರಸಭೆ ಅಧಿಕಾರಿಗಳು ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಪರಿಸರ ಮಲಿನಗೊಳ್ಳುತ್ತಿದೆ. ಹೀಗಾಗಿ ತ್ಯಾಜ್ಯ ಸುರಿಯದಂತೆ ನಿರ್ದೇಶಿಸಬೇಕು ಎಂದು ಕೋರಿದರು.
ವಾದ ಆಲಿಸಿದ ಪೀಠ, ಕೆಎಸ್ಪಿಬಿಸಿಯ ಸಂಬಂಧಪಟ್ಟ ಪರಿಸರ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಸ್ಥಳದಲ್ಲಿ ಅಕ್ರಮವಾಗಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಕಂಡುಬಂದರೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಹಾಗೆಯೇ, ಕೋಲಾರ ಜಿಲ್ಲಾಧಿಕಾರಿಯು ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು. ಅವರು ಪರಿಸರ ಅಧಿಕಾರಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಅಕ್ರಮ ಎಸಗುತ್ತಿರುವುದು ಕಂಡು ಬಂದರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 15ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶಿಸಿತು. ಅಲ್ಲದೇ, ಆದೇಶದ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸೂಚಿಸಿತು.
ಪ್ರಕರಣದ ಹಿನ್ನೆಲೆ:
ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರದ ತ್ಯಾಜ್ಯವನ್ನು ನಗರಸಭೆ ಅಧಿಕಾರಿಗಳು ಕೋಲಾರದ ಲಕ್ಷ್ಮೀಸಾಗರ ಗ್ರಾಮದ ಕ್ವಾರಿ ಹೊಂಡದಲ್ಲಿ ಸುರಿಯುತ್ತಿದ್ದಾರೆ. ಇದನ್ನು ತಪ್ಪಿಸುವಂತೆ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದ್ದರೂ ಹೊಸಕೋಟೆ ನಗರಸಭೆಯು ಕ್ವಾರಿಗೆ ಘನತ್ಯಾಜ್ಯ ಸುರಿಯುವುದನ್ನು ಬಿಟ್ಟಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅಲ್ಲದೇ, ಕ್ವಾರಿಗೆ ಅಕ್ರಮವಾಗಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವುದನ್ನು ತಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಪ್ರಕರಣದಲ್ಲಿ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೆಎಸ್‌ಪಿಸಿಬಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: 2nd PUC ಪರೀಕ್ಷೆ ಫಲಿತಾಂಶ ತಿರಸ್ಕರಣೆ ಅಥವಾ ಪರೀಕ್ಷೆಗೆ ಹಾಜರಾಗಲು ಇಚ್ಛಿಸುವವರಿಗೆ ಅರ್ಜಿ ಸಲ್ಲಿಸಲು ಅವಕಾಶ