ಬೆಂಗಳೂರು: ರಾಜ್ಯದಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆಯಲ್ಲಿ ಆಗಿರುವ ಸಮಸ್ಯೆ ಬಗೆಹರಿಸುವ ಸಂಬಂಧ ತಾಂತ್ರಿಕ ಸಮಿತಿ ಸಲ್ಲಿಸಿರುವ ವರದಿಯನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮರಾವತಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಗೀತಾ ಗದುಗಿನ್ ಹಾಗೂ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು.
ಮಕ್ಕಳು ಮತ್ತು ಗರ್ಭಿಣಿಯರ ಹಿತದೃಷ್ಟಿಯಿಂದ ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸುವ ನಿಟ್ಟಿನಲ್ಲಿ ಮೂರು ತಿಂಗಳಲ್ಲಿ ಪರಿಹಾರ ಹುಡುಕುವಂತೆ ಸರ್ಕಾರಕ್ಕೆ 2020ರ ಡಿ.14ರ ಆದೇಶದಲ್ಲಿ ನ್ಯಾಯಾಲಯ ಸೂಚಿಸಿತ್ತು. ಹೀಗಾಗಿ, ರಾಜ್ಯ ಸರ್ಕಾರವು ತಾಂತ್ರಿಕ ಸಮಿತಿ ರಚಿಸಿದೆ. ಅದು 2021ರ ಆ.19ರಂದು ವರದಿ ಸಲ್ಲಿಸಿದ್ದರೂ ಈವರೆಗೂ ಜಾರಿ ಮಾಡಿಲ್ಲ.
ಒಂದು ವೇಳೆ ವರದಿ ಜಾರಿ ಮಾಡಿದರೆ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೂರೈಸುವ ಪೌಷ್ಟಿಕಾಂಶಯುಕ್ತ ಆಹಾರದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು ಎಂದು ಅರ್ಜಿದಾರರು ಪೀಠದ ಗಮನಕ್ಕೆ ತಂದರು. ಈ ವಾದ ಪರಿಗಣಿಸಿದ ನ್ಯಾಯಾಲಯ ಸರ್ಕಾರಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆದೇಶಿಸಿದೆ.