ಬೆಂಗಳೂರು: ಉತ್ತರಾಧಿಕಾರಿ ಪ್ರಮಾಣಪತ್ರ ಮಂಜೂರು ಮಾಡಿರುವುದು ಹಕ್ಕುಗಳನ್ನು ನಿರ್ಧರಿಸುವುದಕ್ಕೆ ಮಾನದಂಡವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಕಲಬುರಗಿಯ ದಿವಂಗತ ನಾಗಪ್ಪ ಸವಡಿಯ ವೃದ್ಧ ತಂದೆ ತಾಯಿಗಳಾದ ಗಂಗಮ್ಮ ಮತ್ತು ಗುರುಪಾದಪ್ಪ ಸವಡಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ಏಕ ಸದಸ್ಯಪೀಠ ಮೃತ ವ್ಯಕ್ತಿಯ ಸೇವಾ ಭತ್ಯೆಗಳನ್ನು ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿದೆ. ಅಲ್ಲದೆ, ಉತ್ತರದಾಯಿತ್ವ ಪ್ರಮಾಣಪತ್ರ ವಿತರಣೆ ವ್ಯಕ್ತಿಯ ಸಾವಿನ ನಂತರದ ಭತ್ಯೆ ಮತ್ತು ಸಾಲಗಳನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಗುರುತಿಸಲು ಮಾತ್ರ. ಆದರೆ ಅದನ್ನೇ ಮುಂದಿಟ್ಟುಕೊಂಡು ಹಕ್ಕು ಮಂಡಿಸಲಾಗದು ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎರಡೂ ಅಧೀನ ನ್ಯಾಯಾಲಯಗಳು ಪೋಷಕರನ್ನು ಒಂದನೇ ದರ್ಜೆ ಉತ್ತರದಾಯಿಗಳೆಂದು ಒಪ್ಪಿಕೊಂಡಿದೆ. ಹಾಗಾಗಿ ಉತ್ತರದಾಯಿತ್ವ ಪ್ರಮಾಣಪತ್ರವನ್ನು ಜಂಟಿ ಹೆಸರಿನಲ್ಲಿ ನೀಡಬೇಕಾಗಿತ್ತು ಮತ್ತು ಅದರಲ್ಲಿ ಸೇವಾ ಭತ್ಯೆಯಲ್ಲಿ ಯಾರ‍್ಯಾರಿಗೆ ಎಷ್ಟೆಷ್ಟು ಪಾಲು ಎಂಬುದನ್ನು ನಿರ್ಧರಿಸುವ ವಿಚಾರ ಪೋಷಕರು ಮತ್ತು ಪತ್ನಿ ಹಾಗೂ ಮಗುವಿಗೆ ಬಿಡಬೇಕಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ: ನಾಗಪ್ಪ ಸಂಗಮೇಶ್ವರ ಆಸ್ಪತ್ರೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪೋಷಕರು ನಾಗಪ್ಪ ಜತೆ ಪ್ರತ್ಯೇಕ ಮನೆಯಲ್ಲಿ ವಾಸ ಮಾಡುತ್ತಿದ್ದರು. 2008ರಲ್ಲಿ ನ.7ರಂದು ನಾಗಪ್ಪ ನಿಧನದ ನಂತರ ಅವರು ಪೊಷಕರು ನಾವೇ ಮೊದಲ ದರ್ಜೆ ಉತ್ತರದಾಯಿಗಳು ಹಾಗೂ ತಮ್ಮ ಮೃತ ಪುತ್ರನ ಎಲ್ಲ ಸೇವಾ ಭತ್ಯೆಗಳು ತಮಗೆ ಬರಬೇಕು ಎಂದು ಕೋರಿದ್ದರು.
ಈ ಮಧ್ಯೆ, ನಾಗಪ್ಪ ಪತ್ನಿ ಪ್ರತಿಭಾ ಹಾಗೂ ಪುತ್ರ ಪ್ರತೀಕ್ ಸಹ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಸಿವಿಲ್ ಕೋರ್ಟ್‌ನಿಂದ ಉತ್ತರದಾಯಿತ್ವ (ಸಕ್ಸಸನ್) ಸರ್ಟಿಫಿಕೇಟ್ ಪಡೆದುಕೊಂಡಿದ್ದರು. ಆದರೆ ಆ ಪ್ರಮಾಣಪತ್ರದಲ್ಲಿ, ನಾಗಪ್ಪ ಅವರ ತಂದೆ ತಾಯಿಗಳಿಗೆ ಸೇವಾ ಭತ್ಯೆಯನ್ನು ಪಡೆಯುವಲ್ಲಿ ಯಾವುದೇ ಪಾಲು ಇಲ್ಲ ಎಂಬ ಅಂಶವನ್ನು ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಸಲ್ಲಿಸಿದ ಮೇಲ್ಮನವಿಯನ್ನು ಆಲಿಸಿದ ಜಿಲ್ಲಾ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕಾಯಂಗೊಳಿಸಿ, ನಾಗಪ್ಪ ಅವರು ಪೋಷಕರು ತಮ್ಮ ಅಹವಾಲುಗಳನ್ನು ಆಲಿಸಲು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಆದೇಶ ನೀಡಿತ್ತು. ಆ ಆದೇಶದ ವಿರುದ್ಧ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಆರೋಪಿಯ ವೈಯಕ್ತಿಕ ಹಕ್ಕಿಗಿಂತ ಸಮಾಜದ ಹಿತ ಮುಖ್ಯ: ಹೈಕೋರ್ಟ್