ಬೆಂಗಳೂರು: ಈಗಾಗಲೇ ಮದುವೆಯಾಗಿ ಒಂದು ಮಗು ಇರುವ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ವಿದೇಶದಲ್ಲಿ ನೆಲೆಸಿರುವ ಅಶೋಕ್ (ಹೆಸರು ಬದಲಿಸಲಾಗಿದೆ) ಎಂಬವರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಶೋಕ್ ವಿರುದ್ಧ ದೂರು ನೀಡಿರುವ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಇದೆ ಎಂದು ತಿಳಿಸಿದ್ದಾರೆ. ಹೀಗಿದ್ದರೂ, ಅಶೋಕ್ ಮದುವೆಯಾಗುವುದಾಗಿ ನಂಬಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಈ ದೂರಿನ ತನಿಖೆಗೆ ಅನುಮತಿ ನೀಡಿದಲ್ಲಿ ಕಾನೂನು ಉಲ್ಲಂಘನೆಯಾಗಲಿದೆ ಎಂದು ಪೀಠ ಹೇಳಿತು.
ದೂರುದಾರರು ಮೊದಲ ಮದುವೆ ವಿಚ್ಛೇದನ ಪಡೆದಿರುವುದಕ್ಕೆ ದಾಖಲೆಯನ್ನೂ ಒದಗಿಸಿಲ್ಲ ಮತ್ತು ಅರ್ಜಿದಾರ ಅಶೋಕ್ ಮತ್ತು ದೂರುದಾರರು ವಿವಾಹವಾಗಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿಲ್ಲ. ಮತ್ತೊಬ್ಬರನ್ನು ಮದುವೆಯಾಗಿರುವಾಗ ಅಶೋಕ್ ಎಂಬವರನ್ನು ಪತಿ ಎಂಬುದಾಗಿ ಹೇಳುವುದಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅಶೋಕ್ ವಿರುದ್ಧ ಹಿಂಸೆ (489 ಎ) ಮತ್ತು ವಂಚನೆ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದು ಪಡಿಸಿದೆ.
ಪ್ರಕರಣದ ಹಿನ್ನೆಲೆ: ದೂರುದಾರ ಮಹಿಳೆ ಈಗಾಗಲೇ ಕಿರಣ್ (ಹೆಸರು ಬದಲಿಸಲಾಗಿದೆ) ಎಂಬವರನ್ನು ಮದುವೆಯಾಗಿದ್ದೇನೆ. ಎಂಟು ತಿಂಗಳು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಕಿರಣ್ ಅವರು ಆತನ ಪೋಷಕರೊಟ್ಟಿಗೆ ಬಿಟ್ಟುಹೋಗಿದ್ದರು. ಮತ್ತೆ ಬಂದು ಆರು ತಿಂಗಳ ಕಾಲ ಜತೆಯಲ್ಲಿದ್ದು ನನ್ನನ್ನು ಬಿಟ್ಟು ಹೋಗಿದ್ದಾರೆ. ಎಷ್ಟು ಹುಡುಕಿದರೂ ಸಿಕ್ಕಿಲ್ಲ, ವಾಪಸ್ ಸಹ ಬಂದಿಲ್ಲ. ನಾನು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೆ. ಈ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಗಿಂತ 5 ವರ್ಷ ಚಿಕ್ಕವರಾಗಿದ್ದ ಅರ್ಜಿದಾರ ಅಶೋಕ್ ಪರಿಚಯವಾಗಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಇದರಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು. ಇದಾದ ಬಳಿಕ ವಿದೇಶಕ್ಕೆ ತೆರಳಿ ಮಾಸಿಕ ಹಣ ಕಳುಹಿಸುತ್ತಿದ್ದರು. ಆದರೆ, ಕೆಲವು ದಿನಗಳ ಬಳಿಕ ನೀನು ನನಗೆ ಬೇಡ ಎಂದು ಹೇಳಿ ಹಣ ಕಳಿಸುವುದನ್ನು ನಿಲ್ಲಿಸಿದ್ದರು. ಇದರಿಂದ ಮಹಿಳೆ ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.
ಇದನ್ನು ಪ್ರಶ್ನಿಸಿ ಅಶೋಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ದೂರುದಾರರಾದ ಮಹಿಳೆ ಅರ್ಜಿದಾರರಿಂದ ನೆರವು ಕೋರಿದ್ದರು. ಈ ನಿಟ್ಟಿನಲ್ಲಿ ಸಾಕಷ್ಟು ನೆರವು ನೀಡಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಮದುವೆಯಾಗುವುದಾಗಿ ಭರವಸೆ ನೀಡಿಲ್ಲ. ಅಲ್ಲದೆ, ದೂರುದಾರರು ಈಗಾಗಲೇ ಮದುವೆಯಾಗಿದ್ದು, ಮಗು ಕೂಡಾ ಇದೆ. ಆದ್ದರಿಂದ ಅರ್ಜಿದಾರರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಮಾಡಬೇಕು ಎಂದು ಕೋರಿದ್ದರು.
ದೂರುದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ವಿಚಾರಣೆ ನಡೆದಲ್ಲಿ ಸತ್ಯಾಂಶ ಬೆಳಕಿಗೆ ಬರಲಿದೆ. ಈ ನಿಟ್ಟಿನಲ್ಲಿ ಪ್ರಕರಣ ರದ್ದು ಮಾಡಬಾರದು ಎಂದು ಕೋರಿದರು. ವಾದ ಆಲಿಸಿ ನ್ಯಾಯಪೀಠ ಪ್ರಕರಣ ರದ್ದುಪಡಿಸಿ ಆದೇಶಿಸಿತು.