ಬೆಂಗಳೂರು : ಕವಿ ಸರ್ವಜ್ಞನ ತ್ರಿಪದಿ 'ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು' ಎನ್ನುವ ಮೂಲಕ ಕೃಷಿ ಉದ್ಯೋಗದ ಬಗ್ಗೆ ಹೆಮ್ಮೆ ಇರಬೇಕು ಎಂದು ಅರ್ಜಿದಾರರೊಬ್ಬರಿಗೆ ಹೈಕೋರ್ಟ್ ತಿಳಿಸಿತು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ, ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮುಂದುವರೆದು ಅರ್ಜಿದಾರರ ಉದ್ಯೋಗವೇನು ಎಂದು ಪ್ರಶ್ನಿಸಿತು. ಇದಕ್ಕೆ ಅರ್ಜಿದಾರರ ಪರ ವಕೀಲರು ʼಕೃಷಿಕʼ ಎಂದು ಮೆಲುಧ್ವನಿಯಲ್ಲಿ ಹೇಳಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ನಿಮ್ಮ ಉದ್ಯೋಗದ ಬಗ್ಗೆ ನಿಮಗೆ ನಾಚಿಕೆ ಏಕೆ? ಕೃಷಿಕನಾಗುವುದು ತಪ್ಪಲ್ಲ. ಕೃಷಿಕ ಎಂದು ಹೇಳಲು ನಾಚಿಕೆ ಏಕೆ? ಕಾಸ್ ಟೈಟಲ್ನಲ್ಲಿ ಉದ್ಯೋಗದ ಮಾಹಿತಿ ಉಲ್ಲೇಖಿಸಿಲ್ಲ. ಕೃಷಿ ಅತ್ಯುತ್ತಮ ಉದ್ಯೋಗ. ಅದು ಜಗತ್ತಿನ ಅತಿ ಹಳೆಯ ಉದ್ಯೋಗ. ಇದಕ್ಕೆ ನಾಚಿಕೆಪಡಬಾರದು ಎಂದು ತಿಳಿಸಿತು.
ಇದನ್ನೂ ಓದಿ: ನ್ಯಾಯಮೂರ್ತಿ ವರ್ಗಾವಣೆ ಕುರಿತು ಸಿಜೆಐಗೆ ಪತ್ರ ಬರೆದ ಆರೋಪ: ಮುರುಘಾ ಮಠದ ಸಿಇಒಗೆ ಹೈಕೋರ್ಟ್ ಸಮನ್ಸ್
ನ್ಯಾಯಮೂರ್ತಿ ದೀಕ್ಷಿತ್ ಅವರು ಕವಿ ಸರ್ವಜ್ಞ ಅವರ ತ್ರಿಪದಿ, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು, ಮೇಟಿಯಂ ರಾಟಿ ನಡೆದುದಲ್ಲವೇ ಲೋಕಕ್ಕೆ, ಮೇಟಿಯೇ ಶ್ರೇಷ್ಠ ಸರ್ವಜ್ಞ ಎಂದು ತಿಳಿಸಿದರು. ಅರ್ಜಿದಾರರ ಪರ ವಕೀಲರು, ಆದಾಯ ತೆರಿಗೆ, ದಾಳಿ ಇರುವುದಿಲ್ಲ ಎಂದು ಲಘು ದಾಟಿಯಲ್ಲಿ ಹೇಳಿದರು. ಇದಕ್ಕೆ ಪೀಠವು ಅವೆಲ್ಲಾ ಲಾಭಗಳು. ಕೃಷಿಕನಾಗಿರುವುದಕ್ಕೆ ಹೆಮ್ಮೆ ಇರಬೇಕು. ಏಕೆಂದರೆ ದೇಶ ಬಾಂಧವರಿಗೆ ರೈತರು ಅನ್ನ ನೀಡುತ್ತಾರೆ ಎಂದರು.
ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ವಿಚಾರಣಾ ನ್ಯಾಯಾಲಯ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ