ಬೆಂಗಳೂರು: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದ ಕ್ರಮ ಪ್ರಶ್ನಿಸಿದ್ದ ಅರ್ಜಿಯ ತಿದ್ದುಪಡಿ ಮಾಡುವುದಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಡಿಎಸ್ ಮಲ್ಲಿಕಾರ್ಜುನ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿದ್ದ ಹಿಂದೂ ಕಾನೂನಿನಡಿಯಲ್ಲಿ ಪೀಠಾಧಿಪತಿಗಳ ಅಧಿಕಾರ, ವ್ಯಾಪ್ತಿಗೆ ಸಂಬಂಧಿಸಿದಂತೆ ಹಲವು ಅಂಶಗಳನ್ನು ಅರ್ಜಿಯಲ್ಲಿ ಸೇರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯ ತಿದ್ದುಪಡಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮನವಿ ಪುರಸ್ಕರಿಸಿದ ನ್ಯಾಯಪೀಠ, ಮುಂದಿನ ಮೂರು ದಿನಗಳಲ್ಲಿ ಅರ್ಜಿಯ ತಿದ್ದುಪಡಿ ಮಾಡಲು ಅವಕಾಶ ನೀಡಿತು. ಜತೆಗೆ, ಅರ್ಜಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ ಅಂತಿಮ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಅರ್ಜಿದಾರರ ಮನವಿಯ ಮೇರೆಗೆ ಮತ್ತೊಮ್ಮೆ ವಿಚಾರಣೆ ನಡೆಸುವುದಕ್ಕೆ ಸಮ್ಮತಿಸಿದೆ. ವಿಚಾರಣೆಯನ್ನು ಜನವರಿ 12ಕ್ಕೆ ನಿಗದಿ ಪಡಿಸಿದೆ.
ಈ ಹಿಂದೆ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮುರುಘಾ ಮಠದ ಪೀಠಾಧಿಪತಿಗಳು, ಪೋಕ್ಸೋ ಪ್ರಕರಣ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಜೈಲಿನಿಂದಲೇ ಮಠ ಮತ್ತು ವಿದ್ಯಾಸಂಸ್ಥೆಗಳ ಆಡಳಿತ ನಡೆಸುವುದಾದರೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗೆ ಭಾರಿ ಹಾನಿಯುಂಟಾಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಇದನ್ನೂ ಓದಿ:ಕೇಂದ್ರ ಸರ್ಕಾರದ ನೋಟು ಬ್ಯಾನ್ ನಿರ್ಧಾರ ಸರಿ ಎಂದ ಸುಪ್ರೀಂ ಕೋರ್ಟ್