ಬೆಂಗಳೂರು: ಸಾರ್ವಜನಿಕ ಅಭಿಪ್ರಾಯ ಆಲಿಸದೇ, ವಿಧಾನಸಭೆಯಲ್ಲಿ ಚರ್ಚಿಸದೇ ಸರ್ಕಾರ ಇತ್ತೀಚೆಗೆ ತನ್ನ ಹಲವು ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಅಂತೆಯೇ ಕರ್ನಾಟಕ ಜಲ್ಲಿ ಕ್ರಷರ್ಗಳ ನಿಯಂತ್ರಣ ಕಾಯ್ದೆ 2011ಕ್ಕೂ ತಿದ್ದುಪಡಿ ತಂದಿದೆ. ಈ ಸಂಬಂಧ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಸರ್ಕಾರಕ್ಕೆ ನೋಟಿಸ್ ಜಾರಿಯಾಗಿದೆ.
ಸರ್ಕಾರ ಈ ನೋಟಿಸನ್ನು ಸಾಮಾನ್ಯ ಎಂಬಂತೆ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಕರ್ನಾಟಕ ಜಲ್ಲಿ ಕ್ರಷರ್ಗಳ ನಿಯಂತ್ರಣ ಕಾಯ್ದೆ ರೂಪುಗೊಂಡಿದ್ದೇ ಹೈಕೋರ್ಟ್ ನಿರ್ದೇಶನಗಳ ಮೇರೆಗೆ. ಎರಡು ದಶಕಗಳಿಗೂ ಹಿಂದೆ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ಸಂಬಂಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ 1998 ರಲ್ಲಿ ಜಲ್ಲಿ ಕ್ರಷರ್ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾಯ್ದೆ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ 2011ರಲ್ಲಿ ಕ್ರಷರ್ಗಳ ನಿಯಂತ್ರಣ ಕಾಯ್ದೆ ಜಾರಿಗೆ ತಂದಿತ್ತು. ಆದರೀಗ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರ ಈ ಹಿಂದೆ ಕೋರ್ಟ್ ಸೂಚಿಸಿದ್ದ ಸುರಕ್ಷತಾ ವಲಯವನ್ನು ನಿರ್ಲಕ್ಷಿಸಿರುವ ಆರೋಪಕ್ಕೆ ಸಿಲುಕಿದೆ.
ಮುಖ್ಯವಾಗಿ ರಾಜ್ಯಪಾಲರು ಕಾಯ್ದೆ ಸಂಬಂಧ ಯಾವುದೇ ತುರ್ತು ಇಲ್ಲದಿದ್ದರೂ ಸಂವಿಧಾನದ ವಿಧಿ 213 ರಡಿ ಲಭ್ಯವಿರುವ ಅಧಿಕಾರ ಬಳಸಿ ಸುಗ್ರೀವಾಜ್ಞೆಗೆ ವಿವೇಕರಹಿತವಾಗಿ ಅಂಕಿತ ಹಾಕಿದ್ದಾರೆ. ಕಾಯ್ದೆ ಸಂಬಂಧ ಯಾವುದೇ ತುರ್ತು ಪರಿಸ್ಥಿತಿ ಇಲ್ಲದಿದ್ದರೂ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ಸಾರ್ವಜನಿಕ ನಂಬಿಕೆಯ ಉಲ್ಲಂಘನೆ ಮತ್ತು ಅಸಂವಿಧಾನಿಕ ಎಂದು ಆರೋಪಿಸಲಾಗಿದೆ. ಸರ್ಕಾರ ಗಣಿ ಮತ್ತು ಕ್ರಷರ್ ಕುಳಗಳಿಗೆ ನೆರವು ನೀಡಲು ಮುಂದಾಗಿದೆ ಎಂದು ಆರೋಪಿಸಿರುವ ಅರ್ಜಿದಾರರು ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತಂದು ಮಾರ್ಚ್ 31 ರಂದು ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.
ವಿವಾದವೇನು?
ಹೈಕೋರ್ಟ್ ನಿರ್ದೇಶನಗಳ ಮೇರೆಗೆ ಕಾಯ್ದೆ ರೂಪಿಸಿದ್ದ ಸರ್ಕಾರ ಸುರಕ್ಷತಾ ವಲಯಕ್ಕೆ ಆದ್ಯತೆ ನೀಡಿತ್ತು. ಅದರಂತೆ ಜಲ್ಲಿ ಕ್ರಷರ್ಗಳು ಸಾರ್ವಜನಿಕ ಪ್ರದೇಶಗಳಾದ ಶಾಲೆ, ದೇವಸ್ಥಾನ, ಜನ ವಸತಿ ಪ್ರದೇಶದಿಂದ ಕನಿಷ್ಠ 2 ಕಿ.ಮೀ ದೂರವಿರಬೇಕು. ರಾಷ್ಟ್ರೀಯ ಹೆದ್ದಾರಿಯಿಂದ 1.5 ಕಿ.ಮೀ, ಸಂಪರ್ಕ ರಸ್ತೆಗಳಿಂದ ಅರ್ಧ ಕಿ.ಮೀ ದೂರದಲ್ಲಿರಬೇಕು ಎಂದು ನಿಯಮ ರೂಪಿಸಿತ್ತು. ಇದೀಗ ಎಲ್ಲ ನಿಯಮಗಳನ್ನು ಸಡಿಲಿಸಲಾಗಿದ್ದು, ತಿದ್ದುಪಡಿ ಕಾಯ್ದೆಯಲ್ಲಿ ಸೆಕ್ಷನ್ 3 ರ ಸಬ್ ಸೆಕ್ಷನ್ (2) (3) (4) (5) (6) (7) ನಿಯಮಗಳನ್ನು ಕೈಬಿಡಲಾಗಿದೆ. ಸುರಕ್ಷತಾ ವಲಯದಲ್ಲಿಯೂ ಕಡಿತ ಮಾಡಿದ್ದು ಕೃಷಿ ಭೂಮಿಗೆ ಇದ್ದ 100 ಮೀಟರ್ ಅಂತರವನ್ನು 50 ಮೀಟರ್ಗೆ ಇಳಿಸಿದೆ. ಇದು ರೈತರ ತೋಟಗಾರಿಕೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೃಷಿಯನ್ನೇ ನಂಬಿರುವ ಶೇಕಡಾ 80 ರಷ್ಟು ರೈತರ ಬದುಕನ್ನು ಅತಂತ್ರಗೊಳಿಸಲಿದೆ ಎಂಬ ಆಂತಕ ವ್ಯಕ್ತವಾಗಿದೆ.
ಇನ್ನು ಕ್ರಷರ್ಗಳ ಮಾಲಿನ್ಯ ನಿಯಂತ್ರಿಸಲು ಹಾಗೂ ಸುರಕ್ಷತಾ ವಲಯವನ್ನು ಕಾಪಾಡಲು ಒಂದು ವರ್ಷದ ಅವಧಿಗೆ ಮಾತ್ರ ಪರವಾನಗಿ ನೀಡುವ ಮತ್ತು ನಿಬಂಧನೆಗಳನ್ನು ಪಾಲಿಸಿದರೆ ವರ್ಷಕ್ಕೊಮ್ಮೆ ಪರವಾನಗಿ ನವೀಕರಿಸಿಕೊಳ್ಳುವ ನಿಯಮವಿತ್ತು. ಆದರೀಗ, ತಿದ್ದುಪಡಿ ಕಾಯ್ದೆಯ ಸೆಕ್ಷನ್ 4(ಎ) ಪ್ರಕಾರ ಯಾವುದೇ ವ್ಯಕ್ತಿ ತಾನು ಪಡೆದುಕೊಂಡ ಪರವಾನಗಿಯನ್ನು ಕಾರಣವಿಲ್ಲದೆಯೂ ಯಾವುದೇ ವ್ಯಕ್ತಿಗೆ ಹಸ್ತಾಂತರಿಸಬಹುದಾಗಿದೆ. ಅಂತೆಯೇ, ಸೆಕ್ಷನ್ 5 ರ ಪ್ರಕಾರ ಪರವಾನಗಿಯನ್ನು 20 ವರ್ಷಗಳ ಅವಧಿಗೆ ನೀಡಬಹುದಾಗಿದೆ. ನಂತರ 10 ವರ್ಷಗಳ ಸುದೀರ್ಘ ಅವಧಿಗೆ ನವೀಕರಿಸಿಕೊಳ್ಳಬಹುದಾಗಿದೆ. ಹೀಗೆ ದಶಕಗಳ ಕಾಲ ಪರವಾನಗಿ ನೀಡುವುದರಿಂದ ಸರ್ಕಾರಕ್ಕೆ ಕ್ರಷರ್ಗಳ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಬದಲಿಗೆ ಲೈಸೆನ್ಸ್ ಪಡೆದುಕೊಳ್ಳುವ ವ್ಯಕ್ತಿ ಶಾಶ್ವತ ಮಾಲೀಕನಂತೆ ವರ್ತಿಸುತ್ತಾನೆ ಎಂಬ ಆರೋಪವಿದೆ.
ಪ್ರಸ್ತುತ ರಾಜ್ಯದಲ್ಲಿರುವ ಬಹುತೇಕ ಕ್ರಷರ್ಗಳ ವಿರುದ್ಧ ರೈತಾಪಿ ವರ್ಗಕ್ಕೆ ಅಸಮಾಧಾನವಿದೆ. ಕ್ರಷರ್ಗಳು ಎಬ್ಬಿಸುವ ಧೂಳು, ಹೊಗೆ ರೈತರ ಬೆಳೆಗಳ ಮೇಲೆ ಹರಡಿ ಪೈರು ನೆಲ ಕಚ್ಚುತ್ತಿರುವ ವ್ಯಾಪಕ ಉದಾಹರಣೆಗಳಿವೆ. ಅಂತೆಯೇ ಕಲ್ಲು ಪುಡಿಯಾಗುವ ವೇಳೆ ಏಳುವ ಧೂಳಿನ ಕಣಗಳು ಗಾಳಿಯಲ್ಲಿ ಬೆರೆತು ಪರಿಸರಕ್ಕೆ, ಜನರ ಉಸಿರಾಟಕ್ಕೆ ಹಾನಿ ಮಾಡುತ್ತಿರುವ ಪ್ರಮಾಣವೂ ದೊಡ್ಡ ಮಟ್ಟದಲ್ಲಿದೆ. ಇದರ ನಡುವೆ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆ ತಿದ್ದುಪಡಿ ಮಾಡಿ ಸುರಕ್ಷತಾ ವಲಯವನ್ನು ನಿರ್ಲಕ್ಷಿಸಿದೆ ಮತ್ತು 20 ವರ್ಷಗಳ ಅವಧಿಗೆ ಪರವಾನಗಿ ನೀಡುವ ಮೂಲಕ ಉಳ್ಳವರ ಪರ ಕಾಳಜಿ ತೋರಿದೆ ಎಂದು ಆರೋಪಿಸಲಾಗಿದೆ.