ಬೆಂಗಳೂರು : ಜುಲೈ 30 ಮತ್ತು 31 ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ತನ್ನ ನಿಲುವನ್ನು ಮರು ಪರಿಶೀಲಿಸುವಂತೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ವಕೀಲರಾದ ಪ್ರದೀಪ್ ಕುಮಾರ್ ಹಾಗೂ ಹನುಮಂತೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿಲುವು ತಳೆದಿದೆ.
ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಇದರ ಪರಿಣಾಮವಾಗಿ ಕಂಟೈನ್‌ಮೆಂಟ್ ಪ್ರದೇಶಗಳ ಸಂಖ್ಯೆ 6 ಸಾವಿರಕ್ಕೂ ಅಧಿಕವಾಗಿದೆ. ಒಂದು ವೇಳೆ ಈ ಸಮಯದಲ್ಲಿ ಪರೀಕ್ಷೆ ನಡೆಸಿದರೆ ಕಂಟೈನ್‌ಮೆಂಟ್ ವಲಯಗಳ ವಿದ್ಯಾರ್ಥಿಗಳಿಗೆ ಹಾಜರಾಗುವುದು ಕಷ್ಟವಾಗಲಿದ್ದು, ಪರೀಕ್ಷೆಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಇದೇ ಜುಲೈ 30 ಮತ್ತು 31 ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿ ಪ್ರಕಟಣೆ ಹೊರಡಿಸಿದೆ. ಹಾಗೆಯೇ, ಪರೀಕ್ಷೆ ನಡೆಸಲು ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಪ್ರಸಕ್ತ ಸಾಲಿನಲ್ಲಿ 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾರೆ.