ಬೆಂಗಳೂರು: ಮಾಗಡಿ ರಸ್ತೆಯ ಬಳಿ ಇರುವ ಸಾಯಿಬಾಬಾ ದೇವಾಲಯದ ಅನಧಿಕೃತ ಜಾಗವನ್ನ ತೆರವುಗೊಳಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ದೇವಾಲಯದ ಸಮಿತಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಎಸ್.ರವಿಚಂದ್ರ ಮತ್ತಿತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ಓಕ್ ಹಾಗೂ ನ್ಯಾಯಮೂರ್ತಿ ಪಿ ಎಂ ನವಾಜ್ ಅವರಿದ್ದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ಅರ್ಜಿದಾರರ ಪರ ವಕೀಲ ಎನ್ ಪಿ ಅಮೃತೇಶ್ ವಾದ ಮಂಡಿಸಿದರು. ಪೊಲೀಸ್ ವಸತಿ ಗೃಹಗಳ ಬಳಿ ಸಾರ್ವಜನಿಕ ಸ್ಥಳದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಕಳೆದ ವಿಚಾರಣೆ ವೇಳೆ ನ್ಯಾಯಾಲಯವು ಮೂಲ ದೇವಾಲಯ ಬಿಟ್ಟು, ವಿಸ್ತರಣೆ ಭಾಗವನ್ನು ತಕ್ಷಣ ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠಕ್ಕೆ ವಕೀಲರು ತಿಳಿಸಿದರು.
ಈ ವೇಳೆ ನ್ಯಾಯಪೀಠ ದೇವಾಲಯದ ಸಮಿತಿ ಒಂದು ವಾರದಲ್ಲಿ ಅನಧಿಕೃತವಾಗಿ ಇರುವ ಜಾಗವನ್ನ ತೆರವುಗೊಳಿಸಿ ಪ್ರಮಾಣ ಪತ್ರ ಹೈಕೋರ್ಟ್ಗೆ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿದೆ.