ಬೆಂಗಳೂರು: ನಗರದ ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ಸೀಲ್ ಮತ್ತು ಫ್ರಾಂಕಿಂಗ್ ಯಂತ್ರಗಳನ್ನು ಬಳಸಿ ನಕಲಿ ನೋಂದಣಿ ದಾಖಲೆಗಳನ್ನು ಸೃಷ್ಟಿ ಮಾಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ತ್ಯಾಗರಾಜ ನಗರ ನಿವಾಸಿ ಎಸ್. ನಾರಾಯಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಸ್ಟ್ಯಾಂಪ್ ನೋಂದಣಿ ಇಲಾಖೆಯ ಮಹಾ ನಿರ್ದೇಶಕರು, ನಗರ ಪೊಲೀಸ್ ಆಯುಕ್ತರು, ಹಲಸೂರುಗೇಟ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಿಬಿಐ ಅಧೀಕ್ಷಕರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಮನವಿ:
ನಕಲಿ ಸೀಲ್ ಮತ್ತು ಫ್ರಾಂಕಿಂಗ್ ಯಂತ್ರಗಳನ್ನು ಬಳಸಿ ಯಲಹಂಕ, ಶಿವಾಜಿ ನಗರ ಮತ್ತು ಕೆಂಗೇರಿ ಸೇರಿದಂತೆ ಬೆಂಗಳೂರಿನ ವಿವಿಧ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಕಲಿ ನೋಂದಣಿ ದಾಖಲೆ ಸೃಷ್ಟಿಸಲಾಗಿದೆ.
ಈ ಕುರಿತು ಗಾಂಧಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯ ಹಿರಿಯ ಸಬ್ ರಿಜಿಸ್ಟ್ರಾರ್, 2020ರ ಡಿ.21ರಂದು ಹಲಸೂರುಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ದೂರಿನ ಮೇಲೆ 2021ರ ಜ.4ರಂದು ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಆದರೆ, ಎಫ್‌ಐಆರ್ ದಾಖಲಾಗಿ ಹಲವು ದಿನಗಳು ಕಳೆದರೂ ತನಿಖೆಯು ಪ್ರಗತಿ ಕಂಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಯಾವೊಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಇದು ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದ ಗಂಭೀರ ಕೃತ್ಯವಾಗಿದೆ.
ರಾಜ್ಯದ ಆರ್ಥಿಕತೆ ಗಂಭೀರ ಹಾನಿ ಮಾಡುತ್ತದೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.