ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಧ್ವಜ ಸ್ತಂಭಗಳನ್ನು ಮತ್ತು ಪ್ರತಿಮೆಗಳನ್ನು ಸ್ಥಾಪಿಸದಂತೆ ನಿರ್ದೇಶನ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅರ್ಜಿಯೊಂದಿಗೆ ಸಲ್ಲಿಸಿರುವ ಪೋಟೋಗಳಲ್ಲಿ ಸೂಚಿಸಿರುವ ಸ್ಥಳಗಳಿಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ನಗರ ಪೊಲೀಸರು ಜಂಟಿಯಾಗಿ ತೆರಳಿ ಪರಿಶೀಲನೆ ನಡೆಸಬೇಕು.
ಆ ಕುರಿತಂತೆ ಸಮಗ್ರ ವರದಿ ಸಲ್ಲಿಸಬೇಕು. ಒಂದು ವೇಳೆ ರಸ್ತೆ, ಪಾದಚಾರಿ ಮಾರ್ಗ ಮತ್ತು ಸಾರ್ವಜನಿಕ ಸ್ಥಗಳಗಳಲ್ಲಿ ಅನಧಿಕೃತವಾಗಿ ಧ್ವಜ ಸ್ತಂಭ ಮತ್ತು ಪ್ರತಿಮೆ ಸ್ಥಾಪಿಸಿರುವುದು ಕಂಡ ಬಂದರೆ, ಕೂಡಲೇ ಬಿಬಿಎಂಪಿ ಕಾನೂನು ರೀತಿ ಕ್ರಮ ಜರುಗಿಸಬೇಕು. ನ್ಯಾಯಾಲಯದ ಈ ಆದೇಶದ ಅನುಪಾಲನಾ ವರದಿಯನ್ನು ಆಗಸ್ಟ್ 31ರೊಳಗೆ ಸಲ್ಲಿಸಬೇಕು ಎಂದು ಸೂಚಿಸಿದ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿತು.