ಬೆಂಗಳೂರು : ಸರ್ಕಾರಿ ಜಮೀನುಗಳ ರಕ್ಷಣೆ ಮಾಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಆಸಕ್ತಿ ಇದೆಯೇ ಎಂಬುದರ ಕುರಿತು ನ್ಯಾಯಪೀಠಕ್ಕೆ ತಿಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೇ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಕುಟುಂಬಸ್ಥರಿಂದ ಬಿಡದಿಯ ಕೇತಮಾರನಹಳ್ಳಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನು ಕಬಳಿಕೆ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಸೂಕ್ತ ಮಾಹಿತಿಯುಳ್ಳ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಅವರ ಸಂಬಂಧಿ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಮತ್ತಿತರರ ವಿರುದ್ಧದ ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರ ಆರೋಪಿಸಿರುವ ಜಮೀನು ಒತ್ತುವರಿಯಾಗಿದೆ ಎಂದು ತಹಸೀಲ್ದಾರ್ ಅವರು 2004ರಲ್ಲಿ ಆದೇಶ ನೀಡಿದ್ದಾರೆ. ಲೋಕಾಯುಕ್ತ 2014ರ ಆಗಸ್ಟ್ 5ರಂದು ಆದೇಶ ನೀಡಿದೆ. 2020ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶವನ್ನು ಎತ್ತಿಹಿಡಿದಿದೆ. ಪ್ರಕರಣ ಮುನ್ನೆಲೆಗೆ ಬಂದು 19 ವರ್ಷ ಕಳೆದಿದೆ. ಸರ್ಕಾರವು 14 ಎಕರೆ ಒತ್ತುವರಿ ಸಂಬಂಧ ಇದೀಗ ಪ್ರಮಾಣ ಪತ್ರ ಸಲ್ಲಿಸುತ್ತಿದೆ, ಇಷ್ಟೊಂದು ವಿಳಂಬ ಏಕೆ ಎಂದು ಕೋರ್ಟ್ ಪ್ರಶ್ನಿಸಿತು.
ವಿಳಂಬಕ್ಕೆ ಹೈಕೋರ್ಟ್ ಅಸಮಾದಾನ: ಅಲ್ಲದೆ, ಇಷ್ಟು ದಿನಗಳ ಕಾಲ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡುವುದು ಹಾಗೂ ಮಹಜರು ಮಾಡಿಲ್ಲ, ಸರ್ವೇ ಮಾಡಿರುವುದು ಮತ್ತು ವಶಕ್ಕೆ ಪಡೆದುಕೊಂಡಿರುವ ಸಂಬಂಧ ಈವರೆಗೂ ಯಾವುದೇ ಅಂಶಗಳನ್ನು ನ್ಯಾಯಾಲಯಕ್ಕೆ ಬಹಿರಂಗಪಡಿಸಿಲ್ಲ. ಈ ರೀತಿಯಲ್ಲಿ ವಿಳಂಬ ಮಾಡುವುದರಿಂದ ನ್ಯಾಯಾಲಯದ ಆದೇಶದಲ್ಲಿ ಸರ್ಕಾರದ ಕ್ರಮವು ಮಧ್ಯಪ್ರವೇಶ ಮಾಡಿದಂತಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. ಸಣ್ಣ ವ್ಯಕ್ತಿಗಳ ವಿಚಾರದಲ್ಲಿ ಒಂದೇ ದಿನ ಕ್ರಮ ಕೈಗೊಳ್ಳುತ್ತೀರಿ, ದೊಡ್ಡ ವ್ಯಕ್ತಿಗಳಾದರೆ ಈ ರೀತಿ ವಿಳಂಬ ಮಾಡುತ್ತೀರಿ. ನ್ಯಾಯಾಲಯದ ಆದೇಶವನ್ನು ಸರ್ಕಾರ ಅನುಷ್ಟಾನ ಮಾಡದಿದ್ದರೆ ನ್ಯಾಯಾಲಯವೇ ಅದನ್ನು ಅನುಷ್ಟಾನ ಮಾಡಲಿದೆ ಎಂದು ಪೀಠವು ತಿಳಿಸಿತು.
ಮುಖ್ಯ ಕಾರ್ಯದರ್ಶಿಗೆ ಮುಕ್ತ ಅವಕಾಶ ನೀಡಿ: ವಿಚಾರಣೆ ವೇಳೆ ಹಾಜರಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರನ್ನು ಉದ್ದೇಶಿಸಿದ ನ್ಯಾಯಪೀಠ, ಅವರು ಪ್ರಾಮಾಣಿಕರಾಗಿದ್ದು ಅವರಿಗೆ ಮುಕ್ತವಾಗಿ ಅವಕಾಶ ನೀಡಿದಲ್ಲಿ ತಮ್ಮ ಸೇವೆಯಲ್ಲಿ ಅದ್ಬುತವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ನ್ಯಾಯಪೀಠ ಸೂಚನೆ ನೀಡಿತು. ಇದಕ್ಕೂ ಮುನ್ನ ನ್ಯಾಯಪೀಠದ ಕಟು ನುಡಿಗಳಿಗೆ ಕಾರ್ಯದರ್ಶಿಗಳು ಗಾಬರಿಗೊಂಡಂತೆ ಕಾಣಿಸುತ್ತಿದ್ದರು.
ಪ್ರಕರಣದ ಹಿನ್ನೆಲೆ ಏನು? : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ವಿವಿಧ ಸರ್ವೆ ನಂಬರ್ಗಳಲ್ಲಿ 14 ಎಕರೆಗೂ ಹೆಚ್ಚು ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ‘ ಎಂದು ಆರೋಪಿಸಿ ಮಾಜಿ ಸಂಸದ, ದಿವಂಗತ ಜಿ. ಮಾದೇಗೌಡ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಬಗ್ಗೆ ತನಿಖೆ ನಡೆಸಬೇಕು ಎಂದು ಲೋಕಾಯುಕ್ತರು ಕಂದಾಯ ಇಲಾಖೆಗೆ 2014ರಲ್ಲಿ ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಆದರೆ, ಹೈಕೋರ್ಟ್ ಆದೇಶವನ್ನು ಸರ್ಕಾರ ಈವರೆಗೂ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಈ ಅರ್ಜಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಟೋಲ್ ಗೊಂದಲ, ಆಕ್ಷೇಪಣೆ ಸಲ್ಲಿಸಲು ಎನ್ಎಚ್ಎಐಗೆ ಹೈಕೋರ್ಟ್ ಸೂಚನೆ